[1] ನನ್ನ ದೇವರೇ, ಶತ್ರುಗಳ ಕೈಯಿಂದ ನನ್ನನ್ನು ಬಿಡಿಸು; ನನಗೆ ವಿರುದ್ಧವಾಗಿ ಎದ್ದಿರುವವರಿಗೆ ನನ್ನನ್ನು ತಪ್ಪಿಸಿ ಭದ್ರಸ್ಥಳದಲ್ಲಿರಿಸು.
[2] ಕೆಡುಕರಿಂದ ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
[3] ಇಗೋ, ಅವರು ನನ್ನ ಜೀವಕ್ಕೆ ಹೊಂಚುಹಾಕುತ್ತಾರೆ; ಬಲಿಷ್ಠರು ನನಗೆ ವಿರುದ್ಧವಾಗಿ ಗುಂಪುಕೂಡಿದ್ದಾರೆ. ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ!
[4] ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಮುತ್ತಿಗೆ ಹಾಕಿ ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.
[5] ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ, ನೀನು ಎಚ್ಚರವಾಗಿ ಎಲ್ಲಾ ಅನ್ಯಜನಾಂಗಗಳನ್ನು ದಂಡಿಸು. ದುಷ್ಟದ್ರೋಹಿಗಳಲ್ಲಿ ಒಬ್ಬನಿಗೂ ದಯತೋರಿಸಬೇಡ. ಸೆಲಾ
[6] ಅವರು ಪ್ರತಿಸಾಯಂಕಾಲವೂ ಬಂದು ಬಂದು ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಿದ್ದಾರೆ.
[7] ಇಗೋ, ಅವರ ಬಾಯಿಗಳು ಎಷ್ಟೋ ಮಾತುಗಳನ್ನು ಕಕ್ಕುತ್ತವೆ; ಅವೆಲ್ಲಾ ಹರಿತವಾದ ಕತ್ತಿಗಳಂತಿವೆ, ಅವರು, “ನಮ್ಮನ್ನು ಕೇಳುವವರು ಯಾರು?” ಅಂದುಕೊಳ್ಳುತ್ತಾರೆ.
[8] ಯೆಹೋವನೇ, ನೀನಾದರೋ ಅವರನ್ನು ನೋಡಿ ನಗುವಿ; ಎಲ್ಲಾ ಅನ್ಯಜನಾಂಗಗಳನ್ನು ಪರಿಹಾಸ್ಯಮಾಡುವಿ.
[9] ನನ್ನ ಬಲವೇ, ನಿನ್ನನ್ನು ನಿರೀಕ್ಷಿಸುತ್ತಿದ್ದೇನೆ. ನನ್ನ ಆಶ್ರಯದುರ್ಗವು ದೇವರೇ.
[10] ನನ್ನ ದೇವರು ತನ್ನ ಮಹಾ ಪ್ರೀತಿಯಿಂದ ನನಗೆ ಸಹಾಯಮಾಡುವನು; ನನ್ನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡುವನು.
[11] ಕರ್ತನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಸಂಹರಿಸಬೇಡ. ನನ್ನ ಜನರು ಮರೆತುಬಿಡದ ಹಾಗೆ ಅವರು ಉಳಿಯಲಿ. ನಿನ್ನ ಸೇನಾಬಲದಿಂದ ಚದುರಿಸಿ, ಭ್ರಾಂತಿಯಿಂದ ಅಲೆದಾಡಿಸಿ ಅವರನ್ನು ಕೆಡವಿಬಿಡು.
[12] ಅವರ ಬಾಯಿಂದ ಬರುವುದೆಲ್ಲಾ ಪಾಪದ ಮಾತೇ. ಅವರ ಅಹಂಕಾರದಿಂದಲೇ ಅವರು ಸಿಕ್ಕಿಬೀಳಲಿ.
[13] ಅವರು ನುಡಿಯುವ ಶಾಪಕ್ಕಾಗಿಯೂ ಸುಳ್ಳಿಗಾಗಿಯೂ, ಅವರನ್ನು ರೌದ್ರದಿಂದ ಸಂಹರಿಸಿ ನಿರ್ನಾಮಗೊಳಿಸು. ಯಾಕೋಬನ ವಂಶದವರನ್ನು ಆಳುವವನು ದೇವರೇ ಎಂಬುದು, ಭೂಲೋಕದಲ್ಲೆಲ್ಲಾ ಗೊತ್ತಾಗಲಿ. ಸೆಲಾ
[14] ಅವರು ಪ್ರತಿಸಾಯಂಕಾಲವೂ ಬಂದು ಬಂದು, ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಾ ಇದ್ದಾರೆ.
[15] ಆಹಾರಕ್ಕಾಗಿ ಅತ್ತಿತ್ತ ತಿರುಗುತ್ತಾರೆ; ಹೊಟ್ಟೆಗಿಲ್ಲದಿದ್ದರೆ ಗುಣುಗುಟ್ಟುತ್ತಾರೆ.
[16] ನಾನಾದರೋ, ಇಕ್ಕಟ್ಟಿನ ಕಾಲದಲ್ಲಿ ಆಶ್ರಯವೂ ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ ಹೊಗಳುವೆನು; ಪ್ರಾತಃಕಾಲದಲ್ಲಿ ನಿನ್ನ ಪ್ರೇಮವನ್ನು ಉಲ್ಲಾಸದಿಂದ ಕೊಂಡಾಡುವೆನು.
[17] ನನ್ನ ಬಲವೇ, ನಿನ್ನನ್ನು ಹಾಡಿಹರಸುವೆನು, ನನ್ನ ಆಶ್ರಯದುರ್ಗವೂ ಕೃಪಾನಿಧಿಯೂ ದೇವರೇ.