[1] ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ, ಸದಾಚಾರಿಗಳಾಗಿ ನಡೆಯುವವರು ಧನ್ಯರು.
[2] ಆತನ ಕಟ್ಟಳೆಗಳನ್ನು ಕೈಕೊಂಡು, ಪೂರ್ಣಹೃದಯದಿಂದ ಆತನನ್ನು ಹುಡುಕುವವರು ಭಾಗ್ಯವಂತರು.
[3] ಅವರು ಆತನ ಮಾರ್ಗದಲ್ಲಿ ನಡೆಯುತ್ತಾರೆ, ಅನ್ಯಾಯ ಮಾಡುವುದೇ ಇಲ್ಲ.
[4] ನಿನ್ನ ನಿಯಮಗಳನ್ನು ಜಾಗರೂಕತೆಯಿಂದ ಕೈಕೊಂಡು ನಡೆಸಬೇಕೆಂದು, ನೀನೇ ಆಜ್ಞಾಪಿಸಿರುತ್ತಿ.
[5] ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವುದರಲ್ಲಿ, ನಾನು ಸ್ಥಿರಮನಸ್ಸುಳ್ಳವನಾಗಿದ್ದರೆ ಒಳ್ಳೇಯದು!
[6] ಹೀಗೆ ನಿನ್ನ ಆಜ್ಞೆಗಳನ್ನೆಲ್ಲಾ ಲಕ್ಷಿಸುವವನಾದರೆ, ನಾನು ಅಪಮಾನಕ್ಕೆ ಗುರಿಯಾಗುವುದಿಲ್ಲ.
[7] ನಾನು ನಿನ್ನ ನೀತಿಯ ವಿಧಿಗಳನ್ನು ಕಲಿತ ಹಾಗೆಲ್ಲಾ, ನಿನ್ನನ್ನು ಯಥಾರ್ಥ ಹೃದಯದಿಂದ ಕೊಂಡಾಡುತ್ತಾ ಹೋಗುವೆನು.
[8] ನಿನ್ನ ಕಟ್ಟಳೆಗಳನ್ನು ಅನುಸರಿಸುವ ನನ್ನನ್ನು, ಸಂಪೂರ್ಣವಾಗಿ ಕೈಬಿಡಬೇಡ. ಬೇತ್.
[9] ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವುದು ಯಾವುದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವುದರಿಂದಲೇ.
[10] ನಾನು ಪೂರ್ಣಮನಸ್ಸಿನಿಂದ ನಿನ್ನನ್ನು ಹುಡುಕುತ್ತೇನೆ, ನಿನ್ನ ಆಜ್ಞೆಗಳಿಗೆ ತಪ್ಪಿಹೋಗದಂತೆ ನನ್ನನ್ನು ಕಾಪಾಡು.
[11] ನಿನಗೆ ವಿರುದ್ಧವಾಗಿ ಪಾಪಮಾಡದಂತೆ, ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
[12] ಸ್ತುತಿಪಾತ್ರನಾದ ಯೆಹೋವನೇ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
[13] ನಿನ್ನ ಎಲ್ಲಾ ಉಪದೇಶಾಜ್ಞೆಗಳನ್ನು, ನನ್ನ ತುಟಿಗಳು ವರ್ಣಿಸುತ್ತವೆ.
[14] ಸರ್ವಸಂಪತ್ತಿನಲ್ಲಿ ಹೇಗೋ, ಹಾಗೆಯೇ ನಿನ್ನ ಕಟ್ಟಳೆಯ ಮಾರ್ಗದಲ್ಲಿ ಆನಂದಿಸುತ್ತೇನೆ.
[15] ನಿನ್ನ ನಿಯಮಗಳನ್ನು ಧ್ಯಾನಿಸುತ್ತಾ, ನಿನ್ನ ದಾರಿಯನ್ನು ಲಕ್ಷಿಸುವೆನು.
[16] ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು, ನಿನ್ನ ವಾಕ್ಯವನ್ನು ಮರೆಯುವುದಿಲ್ಲ. ಗಿಮೆಲ್.
[17] ನಿನ್ನ ಸೇವಕನಾದ ನನ್ನ ಮೇಲೆ ದಯವಿಡು, ಆಗ ಜೀವದಿಂದಿದ್ದು ನಿನ್ನ ವಾಕ್ಯವನ್ನು ಕೈಗೊಳ್ಳುವೆನು.
[18] ನನ್ನ ಕಣ್ಣುಗಳನ್ನು ತೆರೆ, ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು.
[19] ನಾನು ಭೂಲೋಕದಲ್ಲಿ ಪ್ರವಾಸಿಯಾಗಿದ್ದೇನೆ, ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
[20] ಯಾವಾಗಲೂ ನಿನ್ನ ವಿಧಿಗಳನ್ನೇ ಹಂಬಲಿಸುತ್ತಿರುವ ನನ್ನ ಪ್ರಾಣವು ಜಜ್ಜಿಹೋಗಿದೆ.
[21] ನೀನು ಗರ್ವಿಷ್ಠರನ್ನು ಗದರಿಸುತ್ತಿ, ನಿನ್ನ ಆಜ್ಞೆಗಳನ್ನು ಮೀರಿದವರು ಶಾಪಗ್ರಸ್ತರು.
[22] ನಿನ್ನ ಕಟ್ಟಳೆಗಳನ್ನು ಕೈಕೊಂಡವನಾದರಿಂದ, ನನಗಿರುವ ನಿಂದೆ, ಅಪಮಾನಗಳನ್ನು ತೊಲಗಿಸು.
[23] ಪ್ರಭುಗಳು ಕುಳಿತುಕೊಂಡು, ನನಗೆ ವಿರುದ್ಧವಾಗಿ ಒಳಸಂಚು ಮಾಡಿದರೂ, ನಿನ್ನ ಸೇವಕನು ನಿನ್ನ ನಿಬಂಧನೆಗಳನ್ನೇ ಧ್ಯಾನಿಸುತ್ತಿರುವನು.
[24] ನಿನ್ನ ಕಟ್ಟಳೆಗಳು ನನ್ನ ಪರಮಾನಂದ, ಅವೇ ನನ್ನ ಮಾರ್ಗದರ್ಶನ. ದಾಲಿತ್.
[25] ನನ್ನ ಪ್ರಾಣವು ಧೂಳಿನಲ್ಲಿ ಸೇರಿಹೋಗುತ್ತದೆ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
[26] ನನ್ನ ಯಾತ್ರಾನುಭವವನ್ನು ನಿನಗೆ ಹೇಳಿಕೊಂಡಾಗ, ನನಗೆ ಸದುತ್ತರವನ್ನು ದಯಪಾಲಿಸಿದಿ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
[27] ನಿನ್ನ ನಿಯಮಗಳ ದಾರಿಯನ್ನು ತಿಳಿಯಪಡಿಸು, ಆಗ ನಿನ್ನ ಬೋಧನೆಗಳನ್ನು ಧ್ಯಾನಿಸುವೆನು.
[28] ಮನೋವ್ಯಥೆಯಿಂದ ಕಣ್ಣೀರು ಸುರಿಸುತ್ತೇನೆ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಬಲಪಡಿಸು.
[29] ತಪ್ಪಾದ ಮಾರ್ಗವನ್ನು ನನ್ನಿಂದ ದೂರಮಾಡು, ನಿನ್ನ ಧರ್ಮಶಾಸ್ತ್ರವನ್ನು ನನಗೆ ಅನುಗ್ರಹಿಸು.
[30] ಭಕ್ತಿಮಾರ್ಗವನ್ನು ಆರಿಸಿಕೊಂಡಿದ್ದೇನೆ, ನಿನ್ನ ವಿಧಿಗಳನ್ನು ನನ್ನ ಮುಂದೆಯೇ ಇಟ್ಟುಕೊಂಡಿದ್ದೇನೆ.
[31] ನಾನು ನಿನ್ನ ಕಟ್ಟಳೆಗಳನ್ನು ಅಪ್ಪಿಕೊಂಡಿದ್ದೇನೆ, ಯೆಹೋವನೇ, ನನಗೆ ಆಶಾಭಂಗಪಡಿಸಬೇಡ.
[32] ನೀನು ನನ್ನ ಅಂತರಾತ್ಮವನ್ನು ವಿಮೋಚಿಸು, ಆಗ ಆಸಕ್ತಿಯಿಂದ ನಿನ್ನ ಆಜ್ಞಾಮಾರ್ಗವನ್ನು ಅನುಸರಿಸುವೆನು. ಹೇ.
[33] ಯೆಹೋವನೇ, ನಿನ್ನ ಕಟ್ಟಳೆಗಳ ಮಾರ್ಗವನ್ನು ನನಗೆ ಉಪದೇಶಿಸು, ಕಡೆಯವರೆಗೂ ಅದನ್ನೇ ಅನುಸರಿಸಿ ನಡೆಯುವೆನು.
[34] ನನಗೆ ತಿಳಿವಳಿಕೆಯನ್ನು ದಯಪಾಲಿಸು, ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.
[35] ನಿನ್ನ ಆಜ್ಞಾಮಾರ್ಗದಲ್ಲಿ ನನ್ನನ್ನು ನಡೆಸು, ಅದೇ ನನ್ನ ಇಷ್ಟ.
[36] ನನ್ನ ಮನಸ್ಸನ್ನು ದ್ರವ್ಯಾಶೆಗಲ್ಲ, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಸು.
[37] ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು, ನಿನ್ನ ಮಾರ್ಗದಲ್ಲಿ ನಡೆಯುವಂತೆ ನನ್ನನ್ನು ಚೈತನ್ಯಗೊಳಿಸು.
[38] ನಿನ್ನಲ್ಲಿ ಭಯಭಕ್ತಿಯುಳ್ಳವರಿಗಾಗಿ ನೀನು ಮಾಡಿದ ವಾಗ್ದಾನಗಳನ್ನು, ನಿನ್ನ ಸೇವಕನ ವಿಷಯದಲ್ಲಿ ನೆರವೇರಿಸು.
[39] ನನ್ನ ಅವಮಾನವನ್ನು ತೊಲಗಿಸು, ಅದಕ್ಕೋಸ್ಕರ ಅಂಜುತ್ತಿದ್ದೇನೆ. ನಿನ್ನ ಕಟ್ಟಳೆಗಳು ಹಿತಕರವಾಗಿವೆ.
[40] ಇಗೋ, ನಿನ್ನ ನಿಯಮಗಳನ್ನು ಪ್ರೀತಿಸುತ್ತೇನೆ, ನಿನ್ನ ನೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. ವಾವ್.
[41] ಯೆಹೋವನೇ, ನಿನ್ನ ಕೃಪೆಯು ನನಗೆ ದೊರಕಲಿ, ನಿನ್ನ ನುಡಿಗನುಸಾರವಾಗಿ ನನಗೆ ರಕ್ಷಣೆಯುಂಟಾಗಲಿ.
[42] ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನಲ್ಲಾ.
[43] ಸತ್ಯ ವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡ. ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿಕೊಂಡಿದ್ದೇನೆ.
[44] ನಿನ್ನ ಧರ್ಮಶಾಸ್ತ್ರವನ್ನು ಸದಾ ತಪ್ಪದೆ ಕೈಗೊಳ್ಳುವೆನು.
[45] ನಾನು ನಿನ್ನ ನಿಯಮಗಳನ್ನು ಅಭ್ಯಾಸಿಸುವವನಾದುದರಿಂದ, ಸರಾಗವಾಗಿ ನಡೆಯುವೆನು.
[46] ನಿನ್ನ ಕಟ್ಟಳೆಗಳ ವಿಷಯವಾಗಿ, ಅರಸುಗಳ ಮುಂದೆಯೂ ಮಾತನಾಡುವೆನು, ನಾಚಿಕೆಪಡುವುದಿಲ್ಲ.
[47] ನಿನ್ನ ಆಜ್ಞೆಗಳಲ್ಲಿ ಆನಂದಪಡುತ್ತೇನೆ, ಅವು ನನಗೆ ಇಷ್ಟವಾಗಿವೆ.
[48] ನಿನ್ನ ಆಜ್ಞೆಗಳನ್ನು ಗೌರವಿಸುತ್ತೇನೆ, ಅವುಗಳನ್ನು ನಾನು ಪ್ರೀತಿಸುತ್ತೇನೆ, ನಿನ್ನ ನಿಬಂಧನೆಗಳನ್ನು ಧ್ಯಾನಿಸುತ್ತೇನೆ. ಸಾಯಿನ್.
[49] ನಿನ್ನ ವಾಗ್ದಾನವನ್ನು ನಿನ್ನ ಸೇವಕನಿಗೋಸ್ಕರ ನೆನಪುಮಾಡಿಕೋ, ನನ್ನಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದಿಯಲ್ಲಾ!
[50] ನಿನ್ನ ನುಡಿಯು ನನ್ನನ್ನು ಚೈತನ್ಯಗೊಳಿಸುತ್ತದೆ, ಆಪತ್ಕಾಲದಲ್ಲಿ ಇದೇ ನನಗೆ ಆದರಣೆ.
[51] ಗರ್ವಿಷ್ಠರು ನನ್ನನ್ನು ಬಹಳವಾಗಿ ಅಪಹಾಸ್ಯ ಮಾಡಿದರು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಬಿಡಲಿಲ್ಲ.
[52] ಯೆಹೋವನೇ, ನಿನ್ನ ಪುರಾತನ ಉಪದೇಶಾಜ್ಞೆಗಳನ್ನು ನೆನಪುಮಾಡಿಕೊಂಡು, ನನ್ನನ್ನು ಸಂತೈಸಿಕೊಂಡಿದ್ದೇನೆ.
[53] ನಿನ್ನ ಧರ್ಮಶಾಸ್ತ್ರ ಭ್ರಷ್ಟರಾದ ದುಷ್ಟರಿಗಾಗಿ, ಕೋಪಗೊಂಡಿದ್ದೇನೆ.
[54] ನನ್ನ ಪ್ರವಾಸದ ಮನೆಯಲ್ಲಿ ನಿನ್ನ ಕಟ್ಟಳೆಗಳು ನನಗೆ ಗಾಯನವಾದವು.
[55] ಯೆಹೋವನೇ, ರಾತ್ರಿಯಲ್ಲಿ ನಿನ್ನ ನಾಮವನ್ನು ಸ್ಮರಿಸಿಕೊಳ್ಳುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಕೈಗೊಳ್ಳುತ್ತೇನೆ.
[56] ನಿನ್ನ ನಿಯಮಗಳನ್ನು ಅನುಸರಿಸಿದ್ದರಿಂದ ಇದೆಲ್ಲಾ ನನಗೆ ಲಭಿಸಿತು. ಹೇತ್.
[57] ಯೆಹೋವನೇ, ನನ್ನ ಪಾಲು ನೀನೇ, ನಿನ್ನ ವಾಕ್ಯಗಳನ್ನು ಕೈಗೊಳ್ಳುವೆನೆಂದು ನಿರ್ಣಯಿಸಿಕೊಂಡಿದ್ದೇನೆ.
[58] ಪೂರ್ಣಮನಸ್ಸಿನಿಂದ ನಿನ್ನ ದಯೆಯನ್ನು ಅಪೇಕ್ಷಿಸಿದ್ದೇನೆ, ನಿನ್ನ ನುಡಿಗನುಸಾರವಾಗಿ ನನಗೆ ಪ್ರಸನ್ನನಾಗು.
[59] ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಕೊಂಡಿದ್ದೇನೆ.
[60] ನಿನ್ನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಆಸಕ್ತನಾದೆನು, ಆಲಸ್ಯಮಾಡಲಿಲ್ಲ.
[61] ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆಯಲಿಲ್ಲ.
[62] ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡಲು, ಮಧ್ಯರಾತ್ರಿಯಲ್ಲಿ ಏಳುವೆನು.
[63] ನಿನ್ನ ನಿಯಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.
[64] ಯೆಹೋವನೇ, ಭೂಲೋಕವು ನಿನ್ನ ಶಾಶ್ವತ ಪ್ರೀತಿಯಿಂದ ತುಂಬಿದೆ, ನಿನ್ನ ಕಟ್ಟಳೆಗಳನ್ನು ನನಗೆ ಬೋಧಿಸು. ಟೇತ್.
[65] ಯೆಹೋವನೇ, ನೀನು ನಿನ್ನ ವಾಗ್ದಾನಕ್ಕೆ ತಕ್ಕಂತೆ, ನಿನ್ನ ಸೇವಕನಿಗೆ ಮಹೋಪಕಾರ ಮಾಡಿದ್ದಿ.
[66] ಸುಜ್ಞಾನವನ್ನು, ವಿವೇಕಗಳನ್ನು ನನಗೆ ಕಲಿಸಿಕೊಡು, ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.
[67] ಕಷ್ಟಾನುಭವಕ್ಕಿಂತ ಮೊದಲೇ ತಪ್ಪಿಹೋಗುತ್ತಿದ್ದೆನು, ಈಗಲಾದರೋ ನಿನ್ನ ನುಡಿಗಳನ್ನು ಕೈಗೊಳ್ಳುತ್ತೇನೆ.
[68] ನೀನು ಒಳ್ಳೆಯವನು, ಒಳ್ಳೆಯದನ್ನು ಮಾಡುವವನೂ ಆಗಿದ್ದಿ, ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು.
[69] ಗರ್ವಿಷ್ಠರು ನನ್ನ ವಿರುದ್ಧವಾಗಿ ಸುಳ್ಳುಕಲ್ಪಿಸಿದ್ದಾರೆ, ನಾನಾದರೋ ಪೂರ್ಣಮನಸ್ಸಿನಿಂದ ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
[70] ಅವರ ಹೃದಯದಲ್ಲಿ ಸತ್ಯವಿಲ್ಲ, ನಾನಾದರೋ ನಿನ್ನ ಧರ್ಮಶಾಸ್ತ್ರದಲ್ಲಿ ಉಲ್ಲಾಸಪಡುತ್ತೇನೆ.
[71] ಕಷ್ಟಾನುಭವವು ಹಿತಕರವಾಯಿತು, ಅದುದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.
[72] ನೀನು ಕೊಟ್ಟ ಧರ್ಮಶಾಸ್ತ್ರವು, ಸಾವಿರಾರು ಚಿನ್ನ, ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ. ಯೋದ್.
[73] ನಿನ್ನ ಕೈಗಳು ನನ್ನನ್ನು ರೂಪಿಸಿ ನಿಲ್ಲಿಸಿದವು, ನಿನ್ನ ಆಜ್ಞೆಗಳನ್ನು ಕಲಿಯುವುದಕ್ಕೆ ನನಗೆ ಬುದ್ಧಿಯನ್ನು ಕೊಡು.
[74] ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನನ್ನು ನೋಡಿ ಸಂತೋಷಿಸಲಿ, ನಾನು ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನಲ್ಲಾ.
[75] ಯೆಹೋವನೇ, ನಿನ್ನ ವಿಧಿಗಳು ನೀತಿಯುಳ್ಳವುಗಳಾಗಿವೆ ಎಂದೂ, ನೀನು ನಂಬಿಗಸ್ತಿಕೆಯಿಂದಲೇ ನನ್ನನ್ನು ಕುಗ್ಗಿಸಿದ್ದೀ ಎಂದೂ ತಿಳಿದುಕೊಂಡಿದ್ದೇನೆ.
[76] ನಿನ್ನ ಸೇವಕನಿಗೆ ನುಡಿದ ಪ್ರಕಾರ, ನನ್ನ ಸಮಾಧಾನಕ್ಕೋಸ್ಕರ ಕೃಪೆಯನ್ನು ದಯಪಾಲಿಸು.
[77] ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ.
[78] ಗರ್ವಿಷ್ಠರು ಮಾನಭಂಗ ಹೊಂದಲಿ, ಅವರು ಮೋಸದಿಂದ ನನಗೆ ಕೇಡು ಮಾಡಿದ್ದಾರೆ. ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುತ್ತಿರುವೆನು.
[79] ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನ ಕಡೆಗೆ ತಿರುಗಿಕೊಂಡು, ನಿನ್ನ ಕಟ್ಟಳೆಗಳನ್ನು ಗ್ರಹಿಸಿಕೊಳ್ಳಲಿ.
[80] ನನ್ನ ಮನಸ್ಸು ನಿನ್ನ ಕಟ್ಟಳೆಗಳಲ್ಲಿ ಆಸಕ್ತವಾಗಲಿ, ಆಗ ನನ್ನ ಆಶಾಭಂಗಕ್ಕೆ ಕಾರಣವಿರುವುದಿಲ್ಲ. ಕಾಫ್.
[81] ನಿನ್ನ ರಕ್ಷಣೆಯ ಬಯಕೆಯಿಂದಲೇ ನನ್ನ ಮನವು ಬಲಗುಂದಿತು, ನಾನು ನಿನ್ನ ವಾಕ್ಯದಲ್ಲೇ ನಿರೀಕ್ಷೆಯುಳ್ಳವನಾಗಿದ್ದೇನೆ.
[82] ನಿನ್ನ ನುಡಿಯನ್ನು ನೆರವೇರಿಸಿ ಯಾವಾಗ ನನ್ನನ್ನು ಸಂತೈಸುವಿ? ಎಂಬುವುದಕ್ಕೋಸ್ಕರವೇ ನನ್ನ ದೃಷ್ಟಿಯು ಮಂದವಾಯಿತು.
[83] ಹೊಗೆಯಲ್ಲಿ ನೇತು ಹಾಕಿರುವ ಬುದ್ದಲಿಯಂತಿದ್ದೇನೆ, ಆದರೂ ನಿನ್ನ ನಿಬಂಧನೆಗಳನ್ನು ಮರೆಯಲಿಲ್ಲ.
[84] ನಿನ್ನ ಸೇವಕನ ದಿನಗಳು ಬಹುಸ್ವಲ್ಪವಲ್ಲಾ! ನನ್ನನ್ನು ಬಾಧಿಸುವವರಿಗೆ ಶಿಕ್ಷೆ ವಿಧಿಸುವುದು ಯಾವಾಗ?
[85] ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.
[86] ನಿನ್ನ ಆಜ್ಞೆಗಳೆಲ್ಲಾ ಸ್ಥಿರವಾಗಿವೆ, ಅವರು ಮೋಸದಿಂದ ಹಿಂಸಿಸುತ್ತಾರೆ, ನನಗೆ ಸಹಾಯಮಾಡು.
[87] ನನ್ನನ್ನು ಭೂಮಿಯಿಂದ ತೆಗೆದೇಬಿಟ್ಟಿದ್ದರು, ಆದರೆ ನಾನು ನಿನ್ನ ನಿಯಮಗಳನ್ನು ಬಿಡಲೇ ಇಲ್ಲ.
[88] ನಿನ್ನ ಕೃಪೆಗೆ ಅನುಸಾರವಾಗಿ ನನ್ನನ್ನು ಕಾಪಾಡು, ಆಗ ನೀನು ಆಜ್ಞಾಪಿಸಿದ ಕಟ್ಟಳೆಯನ್ನು ಕೈಕೊಳ್ಳುವೆನು. ಲಾಮೆದ್.
[89] ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
[90] ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.
[91] ನಿನ್ನ ವಿಧಿಗಳಿಗನುಸಾರವಾಗಿ ಅವು ಇಂದಿನವರೆಗೂ, ಸ್ಥಿರವಾಗಿ ನಿಂತಿರುತ್ತವೆ. ಏಕೆಂದರೆ ಸರ್ವವಸ್ತುಗಳೂ ನಿನ್ನ ಸೇವೆ ಮಾಡುತ್ತವೆ.
[92] ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ, ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು.
[93] ನಾನು ನಿನ್ನ ನಿಯಮಗಳನ್ನು ಎಂದಿಗೂ ಮರೆಯುವುದಿಲ್ಲ, ಅವುಗಳಿಂದಲೇ ನನ್ನನ್ನು ಬದುಕಿಸಿದ್ದಿ.
[94] ನಾನು ನಿನ್ನವನು, ರಕ್ಷಿಸು, ನಿನ್ನ ನಿಯಮಗಳಲ್ಲಿ ಆಸಕ್ತನಾಗಿದ್ದೇನಲ್ಲಾ.
[95] ದುಷ್ಟರು ನನ್ನನ್ನು ಸಂಹರಿಸಬೇಕೆಂದು ಹೊಂಚಿ ನೋಡುತ್ತಾರೆ, ನಾನು ನಿನ್ನ ಕಟ್ಟಳೆಗಳನ್ನೇ ಲಕ್ಷಿಸಿಕೊಂಡಿರುವೆನು.
[96] ಎಲ್ಲಾ ಸಂಪೂರ್ಣತೆಗೂ ಮೇರೆಯುಂಟೆಂದು ಬಲ್ಲೆನು, ಆದರೆ ನಿನ್ನ ಆಜ್ಞಾಶಾಸನವು ಅಪರಿಮಿತವಾದದ್ದು. ಮೆಮ್.
[97] ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ದಿನವೆಲ್ಲಾ ಅದೇ ನನ್ನ ಧ್ಯಾನ.
[98] ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ.
[99] ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
[100] ನಿನ್ನ ನಿಯಮಗಳನ್ನು ಕೈಗೊಂಡಿರುವುದರಿಂದ, ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
[101] ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು, ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.
[102] ನಾನು ನಿನ್ನ ವಿಧಿಗಳಿಂದ ಸ್ವಲ್ಪವೂ ತಪ್ಪಿಹೋಗಲಿಲ್ಲ, ಏಕೆಂದರೆ ನೀನು ನನಗೆ ಬೋಧಿಸಿದ್ದೀ.
[103] ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.
[104] ನಿನ್ನ ನಿಯಮಗಳ ಮೂಲಕ ವಿವೇಕಿಯಾದೆನು, ಸುಳ್ಳು ಮಾರ್ಗವನ್ನೆಲ್ಲಾ ನಾನು ದ್ವೇಷಿಸುತ್ತೇನೆ. ನೂನ್.
[105] ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ.
[106] ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
[107] ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ, ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
[108] ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು, ದಯವಿಟ್ಟು ಅಂಗೀಕರಿಸು, ನಿನ್ನ ವಿಧಿಗಳನ್ನು ನನಗೆ ಕಲಿಸು.
[109] ನನ್ನ ಜೀವವು ಅಪಾಯದಲ್ಲಿದ್ದೆ, ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವುದಿಲ್ಲ.
[110] ದುಷ್ಟರು ಬಲೆಯೊಡ್ಡಿದ್ದಾರೆ, ನಾನು ನಿನ್ನ ನಿಯಮಗಳಿಂದ ತಪ್ಪಿಹೋಗುವುದಿಲ್ಲ.
[111] ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವತ್ತಾಗಿ ಆರಿಸಿಕೊಂಡಿದ್ದೇನೆ, ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ.
[112] ಕಡೆಯವರೆಗು ಯಾವಾಗಲೂ ನಿನ್ನ ನಿಬಂಧನೆಗಳನ್ನು ಕೈಗೊಳ್ಳುವುದಕ್ಕೆ ಮನಸ್ಸುಮಾಡಿದ್ದೇನೆ. ಸಾಮೆಕ್.
[113] ಚಂಚಲ ಮನಸ್ಸುಳ್ಳವರನ್ನು ದ್ವೇಷಿಸುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.
[114] ನನ್ನ ಆಶ್ರಯವೂ, ಗುರಾಣಿಯೂ ನೀನೇ, ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನೆ.
[115] ದುಷ್ಟರೇ, ತೊಲಗಿರಿ, ನನ್ನ ದೇವರ ಆಜ್ಞೆಗಳನ್ನು ಕೈಗೊಳ್ಳುವೆನು.
[116] ನಿನ್ನ ನುಡಿಯ ಪ್ರಕಾರ ನನ್ನನ್ನು ಉದ್ಧಾರಮಾಡು, ಆಗ ಬದುಕುವೆನು. ನಾನು ನಿರೀಕ್ಷೆಯುಳ್ಳವನಾಗಿದ್ದೇನೆ, ನನ್ನನ್ನು ನಿರಾಶೆಪಡಿಸಬೇಡ.
[117] ನೀನು ನನಗೆ ಆಧಾರವಾಗಿರು, ಆಗ ನಾನು ಸುರಕ್ಷಿತನಾಗಿ ಸದಾ ನಿನ್ನ ನಿಬಂಧನೆಗಳನ್ನು ಲಕ್ಷಿಸುವೆನು.
[118] ನಿನ್ನ ನಿಬಂಧನೆಗಳಿಗೆ ತಪ್ಪಿದವರೆಲ್ಲರನ್ನು ನೀನು ತಳ್ಳಿಬಿಡುತ್ತೀ, ಅವರ ಕುಯುಕ್ತಿಯು ವ್ಯರ್ಥವಾದದ್ದೇ.
[119] ಭೂಲೋಕದ ದುಷ್ಟರೆಲ್ಲರನ್ನು ಕಸದಂತೆ ತೆಗೆದುಬಿಡುತ್ತೀ, ಆದುದರಿಂದ ನಾನು ನಿನ್ನ ಕಟ್ಟಳೆಗಳನ್ನು ಪ್ರೀತಿಸುತ್ತೇನೆ.
[120] ನಿನ್ನ ಭಯದಿಂದ ನನ್ನ ದೇಹದ ಮಾಂಸವು ಕಂಪಿಸುತ್ತದೆ, ನಿನ್ನ ನ್ಯಾಯವಿಧಿಗಳಿಗೆ ಹೆದರುತ್ತೇನೆ. ಆಯಿನ್.
[121] ನಾನು ನಿನ್ನ ನೀತಿವಿಧಿಗಳನ್ನು ಅನುಸರಿಸಿದ್ದೇನೆ, ಬಲಾತ್ಕಾರಿಗಳಿಗೆ ನನ್ನನ್ನು ಒಪ್ಪಿಸಬೇಡ.
[122] ನಿನ್ನ ಸೇವಕನ ಮೇಲಿಗಾಗಿ ನೀನು ಹೊಣೆಗಾರನಾಗು, ಗರ್ವಿಷ್ಠರು ನನ್ನನ್ನು ಬಾಧಿಸದಿರಲಿ.
[123] ನಿನ್ನ ರಕ್ಷಣೆಯನ್ನೂ, ನಿನ್ನ ನೀತಿಯುಳ್ಳ ನುಡಿಯು ನೆರವೇರುವುದನ್ನೂ ನಿರೀಕ್ಷಿಸುತ್ತಾ, ನನ್ನ ದೃಷ್ಟಿ ಮೊಬ್ಬಾಯಿತು.
[124] ನಿನ್ನ ಸೇವಕನನ್ನು ಕೃಪೆಯಿಂದ ನಡೆಸು, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
[125] ನಾನು ನಿನ್ನ ಸೇವಕನು, ನಿನ್ನ ಕಟ್ಟಳೆಗಳನ್ನು ತಿಳಿದುಕೊಳ್ಳುವಂತೆ ವಿವೇಕವನ್ನು ದಯಪಾಲಿಸು.
[126] ಯೆಹೋವನೇ, ನೀನು ಕಾರ್ಯ ನಡೆಸುವುದಕ್ಕೆ ಸಮಯ ಬಂದಿದೆ, ನಿನ್ನ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಾರೆ.
[127] ನಿಜವಾಗಿ ನಿನ್ನ ಆಜ್ಞೆಗಳು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ನನಗೆ ಬಹುಪ್ರಿಯವಾಗಿವೆ.
[128] ನಿಜವಾಗಿ ನಿನ್ನ ಎಲ್ಲಾ ನಿಯಮಗಳು ನ್ಯಾಯವಾಗಿವೆ ಎಂದು ಒಪ್ಪಿಕೊಂಡಿದ್ದೇನೆ, ಎಲ್ಲಾ ಸುಳ್ಳು ಮಾರ್ಗಗಳನ್ನು ದ್ವೇಷಿಸುತ್ತೇನೆ. ಪೆ.
[129] ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ, ಪೂರ್ಣಹೃದಯದಿಂದ ಅವುಗಳನ್ನು ಕೈಗೊಳ್ಳುತ್ತೇನೆ.
[130] ನಿನ್ನ ವಾಕ್ಯವಿವರಣೆ ಬೆಳಕನ್ನು ಕೊಡುತ್ತದೆ, ಸರಳ ಹೃದಯರಿಗೆ ವಿವೇಚನೆಯನ್ನು ನೀಡುತ್ತದೆ.
[131] ನಾನು ಬಾಯಾರಿ ನಿನ್ನನ್ನೇ ಎದುರುನೋಡುತ್ತಿದ್ದೇನೆ, ನಿನ್ನ ಆಜ್ಞೆಗಳನ್ನು ಲವಲವಿಕೆಯಿಂದ ಬಯಸಿದ್ದೇನೆ.
[132] ನನಗೆ ಅಭಿಮುಖನಾಗಿ ಕರುಣಿಸು, ನಿನ್ನ ಹೆಸರನ್ನು ಪ್ರೀತಿಸುವವರಿಗೆ ಹೀಗೆ ಮಾಡುವುದು ನಿನ್ನ ನಿಯಮವಲ್ಲವೇ?
[133] ನಿನ್ನ ನುಡಿಗನುಸಾರವಾಗಿ ನನ್ನ ಹೆಜ್ಜೆಯನ್ನು ದೃಢಪಡಿಸು, ಯಾವ ಅನ್ಯಾಯವಾದರೂ ನನ್ನನ್ನು ಆಳದಂತೆ ಮಾಡು.
[134] ನರ ಮನುಷ್ಯರ ಬಲಾತ್ಕಾರದಿಂದ ನನ್ನನ್ನು ಬಿಡಿಸು, ಆಗ ನಿನ್ನ ನಿಯಮಗಳನ್ನು ಕೈಗೊಳ್ಳುವೆನು.
[135] ನಿನ್ನ ದಾಸನ ಮೇಲೆ ನಿನ್ನ ಮುಖಪ್ರಸನ್ನತೆಯಿರಲಿ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
[136] ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದವರ ನಿಮಿತ್ತ, ನನ್ನ ಕಣ್ಣೀರು ಪ್ರವಾಹವಾಗಿ ಹರಿಯುತ್ತದೆ. ಸಾದ್ದಿ.
[137] ಯೆಹೋವನೇ, ನೀನು ನೀತಿಸ್ವರೂಪನು, ನಿನ್ನ ವಿಧಿಗಳು ನ್ಯಾಯವಾಗಿವೆ.
[138] ನೀತಿ, ಸತ್ಯತೆಗಳಿಂದಲೇ ನಿನ್ನ ಕಟ್ಟಳೆಗಳನ್ನು ಸ್ಥಾಪಿಸಿದ್ದಿ,
[139] ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಟ್ಟಿದ್ದರಿಂದ ನಿನ್ನ ಮೇಲಿನ ಅಭಿಮಾನ ನನ್ನನ್ನು ದಹಿಸಿಬಿಟ್ಟಿತು,
[140] ನಿನ್ನ ನುಡಿಯು ಪರಿಶುದ್ಧವಾದದ್ದು, ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ.
[141] ನಾನು ಅಲ್ಪನೂ, ತಿರಸ್ಕಾರ ಹೊಂದಿದವನೂ ಆಗಿದ್ದೇನೆ, ಆದರೂ ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
[142] ನಿನ್ನ ನೀತಿಯು ನಿತ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ.
[143] ಕಷ್ಟ, ಸಂಕಟಗಳು ನನ್ನನ್ನು ಮುತ್ತಿಕೊಂಡಿವೆ, ಆದರೂ ನಿನ್ನ ಆಜ್ಞೆಗಳು ನನಗೆ ಸಂತೋಷಕರವಾಗಿವೆ.
[144] ನಿನ್ನ ಕಟ್ಟಳೆಗಳು ಸದಾಕಾಲವೂ ನೀತಿಯುಳ್ಳವುಗಳು, ನನಗೆ ವಿವೇಕವನ್ನು ದಯಪಾಲಿಸು, ಆಗ ಬದುಕುವೆನು. ಖೋಫ್.
[145] ಯೆಹೋವನೇ, ಸಂಪೂರ್ಣಮನಸ್ಸಿನಿಂದ ಮೊರೆಯಿಟ್ಟಿದ್ದೇನೆ, ಸದುತ್ತರವನ್ನು ದಯಪಾಲಿಸು, ನಿನ್ನ ನಿಬಂಧನೆಗಳನ್ನು ಅನುಸರಿಸುವೆನು.
[146] ನಿನಗೇ ಮೊರೆಯಿಟ್ಟಿದ್ದೇನೆ ರಕ್ಷಿಸು. ನಿನ್ನ ಕಟ್ಟಳೆಗಳನ್ನು ಕೈಗೊಳ್ಳುವೆನು.
[147] ಅರುಣೋದಯದಲ್ಲಿ ಎದ್ದು ಮೊರೆಯಿಟ್ಟೆನು, ನಿನ್ನ ವಾಕ್ಯವನ್ನು ನಿರೀಕ್ಷಿಸಿಕೊಂಡಿದ್ದೇನೆ.
[148] ನಿನ್ನ ನುಡಿಯನ್ನು ಧ್ಯಾನಿಸಲು, ನನ್ನ ಕಣ್ಣುಗಳು ಇರುಳಿನ ಒಂದೊಂದು ಜಾವದಲ್ಲೂ ತೆರೆದಿರುತ್ತವೆ.
[149] ಯೆಹೋವನೇ, ನಿನ್ನ ಕೃಪೆಗೆ ತಕ್ಕಂತೆ ನನ್ನ ಮೊರೆಯನ್ನು ಕೇಳು, ನಿನ್ನ ವಿಧಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
[150] ನಿನ್ನ ಧರ್ಮಶಾಸ್ತ್ರವನ್ನು ಬಿಟ್ಟು ಕೆಟ್ಟದ್ದನ್ನು ಅನುಸರಿಸುವವರು, ನನ್ನ ಸಮೀಪಕ್ಕೆ ಬಂದಿದ್ದಾರೆ.
[151] ಯೆಹೋವನೇ, ನೀನು ನನ್ನ ಹತ್ತಿರವೇ ಇರುವೆ, ನಿನ್ನ ಆಜ್ಞೆಗಳೆಲ್ಲಾ ಯಥಾರ್ಥವಾಗಿವೆ.
[152] ನೀನು ನಿನ್ನ ಕಟ್ಟಳೆಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಿ ಎಂದು, ನಾನು ಮೊದಲಿನಿಂದಲೇ ಅವುಗಳ ಮೂಲಕ ತಿಳಿದುಕೊಂಡಿದ್ದೇನೆ. ರೇಷ್.
[153] ನನ್ನ ಕಷ್ಟವನ್ನು ನೋಡಿ ನನ್ನನ್ನು ರಕ್ಷಿಸು, ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆತವನಲ್ಲ.
[154] ನನ್ನ ವ್ಯಾಜ್ಯವನ್ನು ನಡೆಸಿ ನನ್ನನ್ನು ಬಿಡಿಸು, ನಿನ್ನ ನುಡಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
[155] ನಿನ್ನ ನಿಬಂಧನೆಗಳನ್ನು ಅಲಕ್ಷ್ಯಮಾಡುವ ದುಷ್ಟರಿಗೆ ರಕ್ಷಣೆಯೇ ಇಲ್ಲ.
[156] ಯೆಹೋವನೇ, ನಿನ್ನ ಕೃಪಾಕಾರ್ಯಗಳು ಬಹಳವಾಗಿವೆ, ನಿನ್ನ ವಿಧಿಗಳಿಗೆ ತಕ್ಕಂತೆ ನನ್ನನ್ನು ಚೈತನ್ಯಗೊಳಿಸು.
[157] ನನ್ನನ್ನು ಹಿಂಸಿಸುವ ವೈರಿಗಳು ಅನೇಕರಿದ್ದರೂ, ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ನಡೆಯಲಿಲ್ಲ.
[158] ನಿನ್ನ ನುಡಿಯನ್ನು ಕೈಗೊಳ್ಳದ ಧರ್ಮಭ್ರಷ್ಟರನ್ನು ನೋಡಿ ಅಸಹ್ಯಪಟ್ಟಿದ್ದೇನೆ.
[159] ಯೆಹೋವನೇ, ನೋಡು, ನಿನ್ನ ನಿಯಮಗಳು ನನಗೆ ಎಷ್ಟೋ ಪ್ರಿಯವಾಗಿವೆ, ನಿನ್ನ ಕೃಪಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
[160] ನಿನ್ನ ವಾಕ್ಯದ ಸಾರಾಂಶವು ಸತ್ಯವೇ, ನಿನ್ನ ನೀತಿವಿಧಿಗಳೆಲ್ಲಾ ಯುಗಯುಗಾಂತರಕ್ಕೂ ಇರುವವು. ಷಿನ್.
[161] ಪ್ರಭುಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ನನ್ನ ಹೃದಯವು ನಿನ್ನ ವಾಕ್ಯಕ್ಕೆ ಮಾತ್ರ ಭಯಪಡುತ್ತದೆ.
[162] ಒಬ್ಬನು ತಾನು ಸಂಪಾದಿಸಿದ ದೊಡ್ಡ ಕೊಳ್ಳೆಯಲ್ಲಿ ಹೇಗೋ, ಹಾಗೆಯೇ ನಾನು ನಿನ್ನ ನುಡಿಯಲ್ಲಿ ಆನಂದಿಸುತ್ತೇನೆ.
[163] ಮಿಥ್ಯವಾದದ್ದನ್ನು ದ್ವೇಷಿಸುತ್ತೇನೆ, ಅದು ನನಗೆ ಅಸಹ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ.
[164] ನಿನ್ನ ನೀತಿವಿಧಿಗಳಿಗೋಸ್ಕರ, ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ.
[165] ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ, ಸಂಪೂರ್ಣ ಸಮಾಧಾನವಿರುತ್ತದೆ, ಅಂಥವರಿಗೆ ವಿಘ್ನಕರವಾದದ್ದೇನೂ ಇರುವುದಿಲ್ಲ.
[166] ಯೆಹೋವನೇ, ಯಾವಾಗ ರಕ್ಷಿಸುವಿಯೋ ಎಂದು, ನಿರೀಕ್ಷಿಸುತ್ತಾ ಇದ್ದೇನೆ, ನಿನ್ನ ಆಜ್ಞೆಗಳನ್ನು ಕೈಗೊಂಡಿದ್ದೇನೆ.
[167] ನಿನ್ನ ಕಟ್ಟಳೆಗಳನ್ನು ಮನಃಪೂರ್ವಕವಾಗಿ ಅನುಸರಿಸಿದ್ದೇನೆ, ಅವು ನನಗೆ ಬಹುಪ್ರಿಯವಾಗಿವೆ.
[168] ನಿನ್ನ ನಿಯಮಗಳನ್ನೂ, ಕಟ್ಟಳೆಗಳನ್ನೂ ಅನುಸರಿಸಿದ್ದೇನೆ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. ತಾವ್.
[169] ಯೆಹೋವನೇ, ನನ್ನ ಕೂಗು ನಿನ್ನ ಸನ್ನಿಧಿಯನ್ನು ಮುಟ್ಟಲಿ, ನಿನ್ನ ವಾಕ್ಯಾನುಸಾರವಾಗಿ ನನಗೆ ಜ್ಞಾನವನ್ನು ದಯಪಾಲಿಸು.
[170] ನನ್ನ ವಿಜ್ಞಾಪನೆಯು ನಿನ್ನ ಸನ್ನಿಧಿಗೆ ಸೇರಲಿ, ನಿನ್ನ ನುಡಿಗೆ ತಕ್ಕಂತೆ ನನ್ನನ್ನು ರಕ್ಷಿಸು.
[171] ನಿನ್ನ ನಿಬಂಧನೆಗಳನ್ನು ನನಗೆ ಕಲಿಸಿದ್ದಿಯಲ್ಲಾ. ನನ್ನ ತುಟಿಗಳಿಂದ ಸದಾ ನಿನ್ನ ಸ್ತುತಿ ಹೊರಡಲಿ,
[172] ನನ್ನ ನಾಲಿಗೆಯು ನಿನ್ನ ನುಡಿಗಳನ್ನು ವರ್ಣಿಸಲಿ, ನಿನ್ನ ಆಜ್ಞೆಗಳೆಲ್ಲಾ ನೀತಿಯುಳ್ಳದ್ದು.
[173] ನಿನ್ನ ನಿಯಮಗಳನ್ನು ಆರಿಸಿಕೊಂಡಿದ್ದೇನೆ, ನಿನ್ನ ಕೈ ನನಗೆ ನೆರವಾಗಲಿ.
[174] ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಯನ್ನು ಕೋರುತ್ತೇನೆ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವು.
[175] ನನ್ನ ಪ್ರಾಣವನ್ನು ಉಳಿಸು, ಅದು ನಿನ್ನನ್ನು ಕೊಂಡಾಡಲಿ. ನಿನ್ನ ನಿಯಮಗಳಿಂದ ನನಗೆ ಸಹಾಯವಾಗಲಿ.
[176] ನಾನು ತಪ್ಪಿಹೋದ ಕುರಿಯಂತೆ ಅಲೆಯುತ್ತಿದ್ದೇನೆ, ನಿನ್ನ ಸೇವಕನನ್ನು ಪರಾಂಬರಿಸು. ನಾನು ನಿನ್ನ ಆಜ್ಞೆಗಳನ್ನು ಮರೆಯುವುದಿಲ್ಲ.