[1] ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು.
[2] ಎಫ್ರಾಯೀಮ್, ಬೆನ್ಯಾಮೀನ್ ಮತ್ತು ಮನಸ್ಸೆ ಕುಲಗಳ ಮುಂದೆ ಹೋಗುವವನಾಗಿ, ನಿನ್ನ ಶೌರ್ಯವನ್ನು ತೋರ್ಪಡಿಸು; ಬಂದು ನಮಗೆ ಜಯಪ್ರದನಾಗು.
[3] ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.
[4] ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನ ಪ್ರಜೆಗಳು ಪ್ರಾರ್ಥಿಸುವಾಗ ನೀನು ಇನ್ನೆಷ್ಟರವರೆಗೆ ಕೋಪಿಸಿಕೊಳ್ಳುವಿ?
[5] ರೋದನವೇ ಅವರ ಆಹಾರವಾಗುವಂತೆಯೂ, ಅಶ್ರುಧಾರೆಯೇ ಅವರ ಪಾನವಾಗುವಂತೆಯೂ ಮಾಡಿದಿ.
[6] ನಮ್ಮನ್ನು ಸುತ್ತಣ ಜನಾಂಗಗಳ ದಿಕ್ಕಾರಕ್ಕೂ, ಶತ್ರುಗಳ ನಿಂದೆಗೂ ಗುರಿಯನ್ನಾಗಿ ಮಾಡಿದಿ.
[7] ಸೇನಾಧೀಶ್ವರನಾದ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.
[8] ನೀನು ಐಗುಪ್ತ ದೇಶದಿಂದ ಒಂದು ದ್ರಾಕ್ಷಾಲತೆಯನ್ನು ತಂದು, ಜನಾಂಗಗಳನ್ನು ಹೊರಗೆ ಹಾಕಿ, ಅದನ್ನು ನೆಟ್ಟಿದ್ದಿ.
[9] ಅದಕ್ಕೋಸ್ಕರ ನೆಲವನ್ನು ಹಸನುಮಾಡಿದ ಮೇಲೆ, ಅದು ಬೇರುಬಿಟ್ಟು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
[10] ಅದರ ನೆರಳಿನಿಂದ ಗುಡ್ಡಗಳೆಲ್ಲಾ ಕವಿಯಲ್ಪಟ್ಟವು. ಅದರ ಕುಡಿಗಳು ದೇವದಾರುವೃಕ್ಷಗಳ ಮೇಲೆ ಹಬ್ಬಿ ಅವುಗಳನ್ನು ಮುಚ್ಚಿಬಿಟ್ಟವು.
[11] ಅದರ ಕೊಂಬೆಗಳು ಸಮುದ್ರದವರೆಗೂ, ಅದರ ಚಿಗುರುಗಳು ಮಹಾನದಿಯವರೆಗೂ ಹರಡಿಕೊಂಡವು.
[12] ನೀನು ಅದರ ಬೇಲಿಯನ್ನೇಕೆ ಮುರಿದುಹಾಕಿದಿ? ದಾರಿಗರೆಲ್ಲರು ಅದರ ಫಲವನ್ನು ಕಿತ್ತುಬಿಡುತ್ತಾರೆ.
[13] ಕಾಡುಹಂದಿಯು ಅದನ್ನು ನಿರ್ಮೂಲಮಾಡುತ್ತದೆ; ಅರಣ್ಯಮೃಗಗಳು ಅದನ್ನು ತಿಂದುಹಾಕುತ್ತವೆ.
[14] ಸೇನಾಧೀಶ್ವರನಾದ ದೇವರೇ, ಅಭಿಮುಖನಾಗಬೇಕು; ನೀನು ಪರಲೋಕದಿಂದ ಕಟಾಕ್ಷಿಸಿ, ಈ ದ್ರಾಕ್ಷಾಲತೆಯನ್ನು ಪರಾಂಬರಿಸು.
[15] ನಿನ್ನ ಬಲಗೈ ನೆಟ್ಟು, ಸಾಕಿ, ಬೆಳೆಸಿದ ಸಸಿಯನ್ನು ಕಾಪಾಡು.
[16] ಅದು ಕಡಿದು ಬೆಂಕಿಯಿಂದ ಸುಡಲ್ಪಟ್ಟಿದೆ. ಅವರು ನಿನ್ನ ಗದರಿಕೆಯಿಂದ ನಾಶವಾಗುತ್ತಾರೆ.
[17] ನಿನ್ನ ಬಲಗೈ ಉದ್ಧರಿಸಿದ ಪುರುಷನೂ, ನೀನು ನಿನಗೋಸ್ಕರ ಸಾಕಿ ಬೆಳೆಸಿದ ನರಪುತ್ರನೂ ಆಗಿರುವವನನ್ನು, ನಿನ್ನ ಹಸ್ತದಿಂದ ಹಿಡಿದಿರು.
[18] ಆಗ ನಾವು ನಿನ್ನಿಂದ ಅಗಲುವುದಿಲ್ಲ. ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನ್ನು ಚೈತನ್ಯಗೊಳಿಸು.
[19] ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.