Skip to content
Opens in a new window
Listen to this chapter • 3:07

[1] ದೇವರೇ, ನನ್ನ ಮೊರೆಯನ್ನು ಲಾಲಿಸು; ನನ್ನ ವಿಜ್ಞಾಪನೆಗೆ ಕಿವಿಮುಚ್ಚಿಕೊಳ್ಳಬೇಡ.

[2] ನನ್ನ ಕಡೆಗೆ ಲಕ್ಷ್ಯಕೊಟ್ಟು ಸದುತ್ತರವನ್ನು ದಯಪಾಲಿಸು.

[3] ಶತ್ರುಗಳ ಅಬ್ಬರ, ದುಷ್ಟರ ಹಿಂಸೆ ಇವುಗಳ ದೆಸೆಯಿಂದ ಪ್ರಲಾಪಿಸುವವನಾಗಿ, ಹೊಯ್ದಾಡುತ್ತಾ ನರಳುತ್ತಿದ್ದೇನೆ. ಅವರು ನನ್ನ ಮೇಲೆ ಅಪಾಯವನ್ನು ಬರಮಾಡಿ, ಕೋಪದಿಂದ ನನ್ನನ್ನು ದ್ವೇಷಿಸುತ್ತಾರೆ.

[4] ನನ್ನ ಹೃದಯವು ನೊಂದು ಬೆಂದುಹೋಗಿದೆ; ಮರಣಭಯವು ನನ್ನನ್ನು ಆವರಿಸಿಕೊಂಡಿದೆ.

[5] ಅಂಜಿ ನಡುಗುತ್ತಿದ್ದೇನೆ; ದಿಗಿಲು ನನ್ನನ್ನು ಹಿಡಿದಿದೆ.

[6] ನಾನು, “ಆಹಾ, ನನಗೆ ರೆಕ್ಕೆಗಳಿದ್ದರೆ ಪಾರಿವಾಳದಂತೆ ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.

[7] ಅವಸರದಿಂದ ಹಾನಿಕರವಾದ ಬಿರುಗಾಳಿಯಿಂದ ತಪ್ಪಿಸಿಕೊಂಡು,

[8] ದೂರ ಹೋಗಿ ಅರಣ್ಯಸ್ಥಳದಲ್ಲಿ ಪ್ರವಾಸಿಯಾಗಿರುತ್ತಿದ್ದೆನು” ಅಂದುಕೊಂಡೆನು. ಸೆಲಾ

[9] ಕರ್ತನೇ, ಅವರ ಭಾಷೆಯನ್ನು ತಾರುಮಾರುಮಾಡಿ ಅವರನ್ನು ಭ್ರಾಂತಿಗೊಳಿಸು. ಪಟ್ಟಣದಲ್ಲಿ ಕಲಹ, ಬಲಾತ್ಕಾರಗಳು ಕಾಣಬರುತ್ತವೆ.

[10] ಅವೇ ಅದರ ಪೌಳಿಗೋಡೆಗಳ ಮೇಲೆ ಹಗಲಿರುಳು ಸುತ್ತುತ್ತಿರುವ ಕಾವಲುಗಾರರು; ಊರೊಳಗೆ ಕೇಡು, ತೊಂದರೆಗಳು ಪ್ರಬಲವಾಗಿವೆ.

[11] ಅದರೊಳಗೆಲ್ಲಾ ನಾಶನವೇ; ದಬ್ಬಾಳಿಕೆ ಮತ್ತು ವಂಚನೆ ಅದರ ಬೀದಿಗಳಿಂದ ತೊಲಗವು.

[12] ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೆನು.

[13] ಆದರೆ ನೀನು ನನಗೆ ಸ್ವಕೀಯನೂ ಆಪ್ತಮಿತ್ರನೂ ಅಲ್ಲವೇ.

[14] ನಾವು ಪರಸ್ಪರವಾಗಿ ರಸಭರಿತ ಸಂಭಾಷಣೆ ಮಾಡುತ್ತಾ ಭಕ್ತಸಮೂಹದೊಡನೆ ದೇವಾಲಯಕ್ಕೆ ಹೋಗುತ್ತಿದ್ದೆವಲ್ಲಾ.

[15] ಆ ದುಷ್ಟರಿಗೆ ಮರಣವು ತಟ್ಟನೆ ಬರಲಿ; ಸಜೀವರಾಗಿಯೇ ಪಾತಾಳಕ್ಕೆ ಇಳಿದುಹೋಗಲಿ. ಅವರ ಮನೆಯಲ್ಲಿಯೂ, ಮನಸ್ಸಿನಲ್ಲಿಯೂ ಕೆಟ್ಟತನವೇ ತುಂಬಿದೆ.

[16] ನಾನಂತೂ ದೇವರಾದ ಯೆಹೋವನಿಗೆ ಮೊರೆಯಿಡುವೆನು; ಆತನು ನನ್ನನ್ನು ರಕ್ಷಿಸುವನು.

[17] ತ್ರಿಕಾಲದಲ್ಲಿಯೂ ಹಂಬಲಿಸುತ್ತಾ ಮೊರೆಯಿಡುವೆನು. ಆತನು ಹೇಗೂ ನನ್ನ ಮೊರೆಯನ್ನು ಕೇಳಿ

[18] ನನ್ನ ವಿರೋಧಿಗಳು ಅನೇಕರಿದ್ದರೂ ಅವರು ನನ್ನನ್ನು ಮುಟ್ಟದಂತೆ ಸುರಕ್ಷಿತವಾಗಿ ಇಡುವನು.

[19] ಅನಾದಿಕಾಲದಿಂದ ಆಸನಾರೂಢನಾಗಿರುವ ದೇವರು ಲಕ್ಷ್ಯವಿಟ್ಟು ಅವರನ್ನು ತಗ್ಗಿಸಿಬಿಡುವನು. ಸೆಲಾ ಅವರು ತಮ್ಮ ಸುಖವು ಕದಲದೆಂದುಕೊಂಡು ದೇವರಿಗೆ ಹೆದರುವುದಿಲ್ಲ.

[20] ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರುದ್ಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

[21] ಅವನ ಮಾತು ಬೆಣ್ಣೆಯಂತೆ ನುಣುಪು; ಹೃದಯವೋ ಕಲಹಮಯ. ಅವನ ನುಡಿಗಳು ಎಣ್ಣೆಗಿಂತ ನಯವಾಗಿದ್ದರೂ ಬಿಚ್ಚು ಕತ್ತಿಗಳೇ ಸರಿ.

[22] ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.

[23] ದೇವರೇ, ನೀನು ದುಷ್ಟರನ್ನು ಪಾತಾಳದ ಕೆಳಕ್ಕೆ ದೊಬ್ಬಿಬಿಡುವಿ. ಕೊಲೆಪಾತಕರೂ ವಂಚಕರೂ ನರಾಯುಷ್ಯದ ಅರ್ಧಾಂಶವಾದರೂ ಬದುಕುವುದಿಲ್ಲ. ನಾನಂತೂ ನಿನ್ನನ್ನೆ ನಂಬಿಕೊಂಡಿರುವೆನು.

ಕೀರ್ತನೆಗಳು — Chapters