[1] ಯೆಹೋವನಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ, ಆತನನ್ನು ಕೀರ್ತಿಸುವುದು ಯುಕ್ತವಾಗಿದೆ.
[2] ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ, ಚದರಿಹೋಗಿದ್ದ ಇಸ್ರಾಯೇಲರನ್ನು ಕೂಡಿಸುತ್ತಿದ್ದಾನೆ,
[3] ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ.
[4] ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ.
[5] ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ, ಆತನ ಜ್ಞಾನವು ಅಪರಿಮಿತವಾಗಿದೆ.
[6] ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.
[7] ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ.
[8] ಆತನು ಆಕಾಶದಲ್ಲಿ ಮೋಡಗಳನ್ನು ಕವಿಸುತ್ತಾನೆ, ಭೂಮಿಗೋಸ್ಕರ ಮಳೆಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
[9] ಆತನು ಪಶುಗಳಿಗೂ, ಕೂಗುತ್ತಿರುವ ಕಾಗೆಮರಿಗಳಿಗೂ ಬೇಕಾದ ಆಹಾರಕೊಡುತ್ತಾನೆ.
[10] ಕುದುರೆಯ ಶಕ್ತಿಯಲ್ಲಿ ಆತನಿಗೆ ಇಷ್ಟವಿಲ್ಲ, ಆಳಿನ ತೊಡೆಯ ಬಲವನ್ನು ಆತನು ಮೆಚ್ಚುವುದಿಲ್ಲ.
[11] ಯೆಹೋವನು ಆನಂದಿಸುವುದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ.
[12] ಯೆರೂಸಲೇಮೇ, ಯೆಹೋವನನ್ನು ಕೀರ್ತಿಸು, ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
[13] ಆತನು ನಿನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ, ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.
[14] ಆತನು ನಿನ್ನ ಪ್ರಾಂತ್ಯದೊಳಗೆ ಸೌಭಾಗ್ಯವನ್ನು ಉಂಟುಮಾಡುತ್ತಾನೆ, ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ.
[15] ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ, ಆತನ ವಾಕ್ಯವು ಬಹು ವೇಗಶಾಲಿಯಾಗಿದೆ.
[16] ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ, ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ.
[17] ರೊಟ್ಟಿ ತುಂಡುಗಳಂತಿರುವ ಆನೆಕಲ್ಲುಗಳನ್ನು ಸುರಿಸುತ್ತಾನೆ, ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು?
[18] ಆತನು ಅಪ್ಪಣೆಕೊಡಲು ಅವು ಕರಗುತ್ತವೆ, ತನ್ನ ಗಾಳಿಯನ್ನು ಬೀಸಮಾಡಲು ನೀರು ಹರಿಯುತ್ತದೆ.
[19] ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ, ತನ್ನ ನಿಯಮವಿಧಿಗಳನ್ನು ಇಸ್ರಾಯೇಲರಿಗೆ ಪ್ರಕಟಿಸುತ್ತಾನೆ.
[20] ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ, ಆತನ ನ್ಯಾಯವಿಧಿಗಳನ್ನು ಅವರು ಅರಿಯರು. ಯೆಹೋವನಿಗೆ ಸ್ತೋತ್ರ!