[1] ಯೆಹೋವನೇ, ನನ್ನನ್ನು ರಕ್ಷಿಸುವ ದೇವರೇ, ಹಗಲಿರುಳು ನಿನಗೆ ಮೊರೆಯಿಡುತ್ತೇನೆ.
[2] ನನ್ನ ಪ್ರಾರ್ಥನೆಯು ನಿನ್ನ ಸನ್ನಿಧಿಯನ್ನು ಮುಟ್ಟಲಿ; ಕಿವಿಗೊಟ್ಟು ನನ್ನ ಕೂಗನ್ನು ಕೇಳು.
[3] ನನ್ನ ಜೀವವು ಕಷ್ಟಗಳಿಂದ ತುಂಬಿಹೋಯಿತು; ನನ್ನ ಪ್ರಾಣವು ಪಾತಾಳಕ್ಕೆ ಹತ್ತಿರವಾಯಿತು.
[4] ಸಮಾಧಿಯಲ್ಲಿ ಸೇರುವವರೊಳಗೆ ಎಣಿಸಲ್ಪಟ್ಟಿದ್ದೇನೆ; ನಿತ್ರಾಣ ಮನುಷ್ಯನಂತಿದ್ದೇನೆ.
[5] ಸತ್ತವನ ಹಾಗೆ ನನ್ನನ್ನು ಹೊರಗೆ ಹಾಕಿದ್ದಾರೆ; ಹತನಾದವನಂತೆ ಸಮಾಧಿಯಲ್ಲಿ ಬಿದ್ದಿದ್ದೇನೆ. ಹತರಾದವರು ನಿನ್ನ ಪರಿಪಾಲನೆ ಇಲ್ಲದವರು; ಅಂಥವರನ್ನು ನೀನು ನೆನಪು ಮಾಡಿಕೊಳ್ಳುವುದಿಲ್ಲ.
[6] ಅಧೋಲೋಕದಲ್ಲಿಯೂ, ಗಾಢಾಂಧಕಾರದಲ್ಲಿಯೂ, ಅಗಾಧ ಸ್ಥಳದಲ್ಲಿಯೂ ನನ್ನನ್ನು ತಳ್ಳಿಬಿಟ್ಟಿದ್ದಿ.
[7] ನಿನ್ನ ಕೋಪಭಾರವು ನನ್ನನ್ನು ಕುಗ್ಗಿಸಿಬಿಟ್ಟಿದೆ; ನಿನ್ನ ಎಲ್ಲಾ ತೆರೆಗಳಿಂದ ನನ್ನನ್ನು ಬಾಧಿಸಿದ್ದಿ. ಸೆಲಾ
[8] ನನ್ನ ಆಪ್ತರು ನನ್ನನ್ನು ನೋಡಿ ಅಸಹ್ಯಪಟ್ಟರು, ನನ್ನನ್ನು ಅವರು ಹೇಸಿ ಬಿಟ್ಟುಹೋಗುವಂತೆ ಮಾಡಿದ್ದೀ; ಸಿಕ್ಕಿಬಿಟ್ಟಿದ್ದೇನೆ, ಬಿಡಿಸಿಕೊಳ್ಳಲಾರೆನು.
[9] ಬಾಧೆಯಿಂದ ನನ್ನ ಕಣ್ಣುಗಳು ಮೊಬ್ಬಾಗಿ ಹೋಗಿವೆ. ಯೆಹೋವನೇ, ಹಗಲೆಲ್ಲಾ ಕೈಚಾಚಿ ನಿನಗೆ ಮೊರೆಯಿಡುತ್ತೇನೆ.
[10] ನೀನು ಸತ್ತವರಿಗೆ ಅದ್ಭುತಕಾರ್ಯಗಳನ್ನು ತೋರಿಸುವಿಯೋ? ಪ್ರೇತಗಳು ಎದ್ದು ನಿನ್ನನ್ನು ಕೊಂಡಾಡುವವೋ? ಸೆಲಾ
[11] ಸಮಾಧಿಯಲ್ಲಿ ನಿನ್ನ ಕೃಪೆಯನ್ನೂ, ನಾಶನಲೋಕದಲ್ಲಿ ನಿನ್ನ ಸತ್ಯತೆಯನ್ನು ಸಾರುವುದುಂಟೋ?
[12] ಕತ್ತಲೆಯ ಲೋಕದಲ್ಲಿ ನಿನ್ನ ಮಹತ್ಕಾರ್ಯಗಳೂ, ಮರೆಯುವ ದೇಶದಲ್ಲಿ ನಿನ್ನ ನೀತಿಯು ತಿಳಿಯಲ್ಪಡುವವೋ?
[13] ನಾನಾದರೋ ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಮುಂಜಾನೆಯಲ್ಲಿ ನನ್ನ ವಿಜ್ಞಾಪನೆಯು ನಿನ್ನ ಮುಂದೆ ಬರುವುದು.
[14] ಯೆಹೋವನೇ, ನನ್ನ ಪ್ರಾಣವನ್ನೇಕೆ ತಳ್ಳಿಬಿಟ್ಟಿ? ನಿನ್ನ ಮುಖವನ್ನು ಮರೆಮಾಡಿದ್ದೇಕೆ?
[15] ಯೌವನಾರಭ್ಯ ಕುಗ್ಗಿದವನೂ, ಮೃತಪ್ರಾಯನೂ, ನಿನ್ನ ಗದರಿಕೆಯಿಂದ ದೆಸೆಗೆಟ್ಟವನೂ ಆಗಿದ್ದೇನಲ್ಲಾ.
[16] ನಿನ್ನ ಕೋಪಜ್ವಾಲೆಯು ನನ್ನನ್ನು ಕವಿದಿದೆ; ನಿನ್ನಿಂದುಂಟಾದ ದಿಗಿಲಿನಿಂದ ಹಾಳಾದೆನು.
[17] ಅವು ದಿನವೆಲ್ಲಾ ನೀರಿನಂತೆ ನನ್ನನ್ನು ಆವರಿಸಿಕೊಂಡಿವೆ; ಒಟ್ಟುಗೂಡಿ ನನ್ನನ್ನು ಸುತ್ತಿಬಿಟ್ಟಿವೆ.
[18] ನನ್ನ ಆಪ್ತಮಿತ್ರರನ್ನು ದೂರಮಾಡಿದಿ; ಅಂಧಕಾರವೇ ನನ್ನ ಒಡನಾಡಿ.