Skip to content
Opens in a new window
Listen to this chapter • 3:50

[1] ನಾನು ಸ್ತುತಿಸುವ ದೇವರೇ, ಸುಮ್ಮನಿರಬೇಡ.

[2] ದುಷ್ಟರು, ವಂಚಕರು ನನಗೆ ವಿರುದ್ಧವಾಗಿ ಬಾಯ್ದೆರೆದಿದ್ದಾರೆ. ಅವರು ಸುಳ್ಳು ನಾಲಿಗೆಯಿಂದ ನನ್ನೊಡನೆ ಮಾತನಾಡುತ್ತಿದ್ದಾರೆ.

[3] ಅವರು ಹಗೆಯ ನುಡಿಗಳಿಂದ ನನ್ನನ್ನು ಮುತ್ತಿಕೊಂಡು, ಕಾರಣವಿಲ್ಲದೆ ನನ್ನ ಸಂಗಡ ಯುದ್ಧ ಮಾಡಿದ್ದಾರೆ.

[4] ನಾನು ಅವರನ್ನು ಪ್ರೀತಿಸಿದರೂ, ಅವರು ನನ್ನನ್ನು ವಿರೋಧಿಸುತ್ತಾರೆ; ನಾನಾದರೋ ನಿನಗೆ ಮೊರೆಯಿಡುತ್ತೇನೆ.

[5] ಉಪಕಾರಕ್ಕೆ ಅಪಕಾರವನ್ನು ಮಾಡಿದ್ದಾರೆ; ನಾನು ಪ್ರೀತಿಸಿದ್ದಕ್ಕೆ ಪ್ರತಿಯಾಗಿ ನನ್ನನ್ನು ದ್ವೇಷಿಸಿದ್ದಾರೆ.

[6] ದುಷ್ಟ ಅಧಿಕಾರಿಯನ್ನು ಅವರ ಮೇಲೆ ನೇಮಿಸು; ತಪ್ಪು ಹೊರಿಸುವವನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.

[7] ನ್ಯಾಯವಿಚಾರಣೆಯಲ್ಲಿ ಅವನು ಅಪರಾಧಿ ಎಂದು ತೀರ್ಪುಹೊಂದಲಿ; ಅವನ ಪ್ರಾರ್ಥನೆಯೂ ಪಾಪವೆಂದು ಎಣಿಸಲ್ಪಡಲಿ.

[8] ಅವನ ಜೀವಿತದ ದಿನಗಳು ಸ್ವಲ್ಪವಾಗಿರಲಿ; ಅವನ ಉದ್ಯೋಗವು ಮತ್ತೊಬ್ಬನಿಗಾಗಲಿ.

[9] ಅವನ ಮಕ್ಕಳು ಅನಾಥರೂ ಮತ್ತು ಹೆಂಡತಿ ವಿಧವೆಯೂ ಆಗಲಿ.

[10] ಅವನ ಮಕ್ಕಳು ತಮ್ಮ ಹಾಳಾದ ಸ್ಥಳಗಳನ್ನು ಬಿಟ್ಟು, ದಿಕ್ಕಿಲ್ಲದವರಂತೆ ಅಲೆಯುತ್ತಾ ಭಿಕ್ಷೆಬೇಡಲಿ.

[11] ಸಾಲಕೊಟ್ಟವನು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.

[12] ಅವನಿಗೆ ಯಾರೂ ಕೃಪೆತೋರಿಸದಿರಲಿ, ದಿಕ್ಕಿಲ್ಲದ ಅವನ ಮಕ್ಕಳಿಗೆ ಯಾರೂ ದಯೆತೋರದಿರಲಿ,

[13] ಅವನ ಸಂತತಿಯು ನಿರ್ಮೂಲವಾಗಲಿ; ಎರಡನೆಯ ತಲೆಯಲ್ಲಿಯೇ ಅದು ನಿರ್ನಾಮವಾಗಿ ಹೋಗಲಿ.

[14] ಯೆಹೋವನು ಅವನ ಹಿರಿಯರ ಪಾಪವನ್ನು ಮರೆಯದಿರಲಿ; ಅವನ ತಾಯಿಯ ಪಾಪವು ಅಳಿದುಹೋಗದಿರಲಿ.

[15] ಅವು ಯೆಹೋವನ ಜ್ಞಾಪಕದಲ್ಲಿ ಇದ್ದೇ ಇರಲಿ. ಆತನು ಅವರ ಹೆಸರನ್ನು ಭೂಮಿಯಿಂದ ತೆಗೆದುಹಾಕಲಿ.

[16] ಏಕೆಂದರೆ ಅವನು ಕರುಣೆ ತೋರಿಸುವುದನ್ನು ಮರೆತುಬಿಟ್ಟನು, ಬಡವನನ್ನು, ದೀನನನ್ನು, ಮನಗುಂದಿದವನನ್ನು ಹಿಂಸಿಸಿ ಕೊಲ್ಲಬೇಕೆಂದು ಯತ್ನಿಸಿದನು.

[17] ಶಪಿಸುವುದು ಅವನಿಗೆ ಇಷ್ಟವಾಗಿತ್ತು, ಅದೇ ಅವನಿಗೆ ಬರಲಿ! ಆಶೀರ್ವದಿಸುವುದು ಅವನಿಗೆ ಇಷ್ಟವಿರಲ್ಲಿಲ್ಲ, ಅದು ಅವನಿಂದ ದೂರವಿರಲಿ!

[18] ಅವನು ಶಾಪವನ್ನೇ ವಸ್ತ್ರವನ್ನಾಗಿ ಹೊದ್ದುಕೊಳ್ಳಲಿ, ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಲಿ.

[19] ಶಾಪವೇ ಅವನ ಹೊದಿಕೆಯಂತೆಯೂ, ನಿತ್ಯವಾದ ನಡುಕಟ್ಟಿನಂತೆಯೂ ಆಗಲಿ.

[20] ನನ್ನನ್ನು ಎದುರಿಸಿ ಕೀಳುಮಾತನಾಡುವವರಿಗೆ ಯೆಹೋವನಿಂದ ಬರುವ ಪ್ರತಿಫಲವು ಇದೇ ಆಗಿರಲಿ.

[21] ಕರ್ತನೇ, ಯೆಹೋವನೇ, ನಿನ್ನ ಕೃಪೆಯು ಹಿತಕರವಾಗಿದೆ; ನಿನ್ನ ಹೆಸರಿನ ನಿಮಿತ್ತ ನನ್ನ ಪಕ್ಷವನ್ನು ಹಿಡಿದು ರಕ್ಷಿಸು.

[22] ನಾನು ಬಡವನೂ, ದೀನನೂ ಆಗಿದ್ದೇನಲ್ಲಾ! ನನ್ನ ಹೃದಯದಲ್ಲಿ ಅಲಗು ನೆಟ್ಟಂತಾಗಿದೆ.

[23] ಸಂಜೆಯ ನೆರಳಿನಂತೆ ಗತಿಸಿಹೋಗುತ್ತಿದ್ದೇನೆ; ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಿದ್ದೇನೆ.

[24] ಉಪವಾಸದಿಂದ ನನ್ನ ಮೊಣಕಾಲುಗಳು ಬಲಹೀನವಾದವು; ನನ್ನ ದೇಹವು ಎಣ್ಣೆಯಿಲ್ಲದೆ ಕ್ಷೀಣವಾಯಿತು.

[25] ನಾನು ಜನರ ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ; ನನ್ನನ್ನು ನೋಡುವವರು ತಲೆಯಾಡಿಸುತ್ತಾರೆ.

[26] ಯೆಹೋವನೇ, ನನ್ನ ದೇವರೇ, ಸಹಾಯಮಾಡು; ನಿನ್ನ ಕೃಪೆಗೆ ತಕ್ಕಂತೆ ರಕ್ಷಿಸು.

[27] ಆಗ ಅವರು ಇದು ನಿನ್ನ ಕೈಕೆಲಸವೆಂದೂ, ಯೆಹೋವನಾದ ನೀನೇ ಇದನ್ನು ಮಾಡಿದೆ ಎಂದು ತಿಳಿದುಕೊಳ್ಳುವರು.

[28] ಅವರು ಶಪಿಸಲಿ, ಚಿಂತೆಯಿಲ್ಲ; ನೀನು ಆಶೀರ್ವದಿಸುವಿ. ಅವರು ಎದ್ದು ಅಪಮಾನ ಹೊಂದುವರು. ಆದರೆ ನಿನ್ನ ಸೇವಕನಾದ ನಾನು ಉಲ್ಲಾಸಿಸುವೆನು.

[29] ಮಾನಭಂಗವೇ ನನ್ನ ವಿರೋಧಿಗಳಿಗೆ ವಸ್ತ್ರವಾಗಲಿ; ನಾಚಿಕೆಯೇ ಅವರ ಹೊದಿಕೆಯಾಗಲಿ.

[30] ಯೆಹೋವನನ್ನು ಬಹಳವಾಗಿ ಕೊಂಡಾಡುವೆನು; ಜನಸಮೂಹದ ಮಧ್ಯದಲ್ಲಿ ಆತನನ್ನು ಕೀರ್ತಿಸುವೆನು.

[31] ಆತನು ದೀನನ ಬಲಗಡೆಯಲ್ಲಿ ನಿಂತುಕೊಂಡು, ಪ್ರಾಣಶಿಕ್ಷೆ ವಿಧಿಸುವವರ ಕೈಯಿಂದ ತಪ್ಪಿಸಿ ರಕ್ಷಿಸುವನು.

ಕೀರ್ತನೆಗಳು — Chapters