Skip to content
Opens in a new window
Listen to this chapter • 5:34

[1] ದೇವರು ಎದ್ದು ಹೊರಡುವಾಗ, ಆತನ ವೈರಿಗಳು ಚದರಿಹೋಗಲಿ; ಆತನ ಹಗೆಗಾರರು ಆತನ ಎದುರಿನಿಂದ ಓಡಿಹೋಗಲಿ.

[2] ಹೊಗೆಯು ಗಾಳಿಯಿಂದ ಹೇಗೋ, ಹಾಗೆ ಅವರು ಆತನಿಂದ ಹಾರಿಹೋಗಲಿ; ಬೆಂಕಿಯ ಮುಂದೆ ಮೇಣವು ಕರಗಿ ಲಯವಾಗಿ ಹೋಗುವಂತೆ, ದೇವರ ಎದುರಿನಲ್ಲಿ ದುಷ್ಟರು ನಾಶವಾಗಿ ಹೋಗಲಿ.

[3] ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಉಲ್ಲಾಸಿಸಲಿ, ಆನಂದಧ್ವನಿಮಾಡಲಿ.

[4] ದೇವರಿಗೆ ಗಾಯನಮಾಡಿರಿ; ಆತನ ನಾಮವನ್ನು ಭಜಿಸಿರಿ; ಅರಣ್ಯದಲ್ಲಿ ಸವಾರಿಮಾಡುತ್ತಾ ಬರುವಾತನಿಗೆ ರಾಜಮಾರ್ಗವನ್ನು ಸಿದ್ಧಮಾಡಿರಿ. ಆತನ ನಾಮಧೇಯ ಯಾಹು; ಆತನ ಸನ್ನಿಧಿಯಲ್ಲಿ ಉಲ್ಲಾಸಿಸಿರಿ.

[5] ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ, ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.

[6] ಒಬ್ಬೊಂಟಿಗರನ್ನು ಸಂಸಾರಿಕರಾಗುವಂತೆ ಮಾಡುತ್ತಾನೆ; ಸೆರೆಯಲ್ಲಿರುವವರನ್ನು ಬಿಡಿಸಿ ಸುಖಾವಸ್ಥೆಗೆ ತರುತ್ತಾನೆ. ದ್ರೋಹಿಗಳಾದರೋ ಮರುಭೂಮಿಯಲ್ಲಿ ಉಳಿಯಬೇಕಾಗುವುದು.

[7] ದೇವರೇ, ನೀನು ನಿನ್ನ ಪ್ರಜೆಯ ಮುಂದೆ ಹೊರಟು, ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಾ ಬರುವಾಗ, ಸೆಲಾ

[8] ದೇವರು ಪ್ರತ್ಯಕ್ಷನಾಗಿದ್ದಾನೆಂದು ಭೂಮಿಯು ಕಂಪಿಸಿತು; ಮೇಘಮಂಡಲವು ಮಳೆಸುರಿಸಿತು. ಇಸ್ರಾಯೇಲರ ದೇವರು ಪ್ರತ್ಯಕ್ಷನಾಗಿದ್ದಾನೆಂದು, ಆ ಸೀನಾಯ್ ಬೆಟ್ಟವು ಕದಲಿತು.

[9] ದೇವರೇ, ನೀನು ಹೇರಳವಾಗಿ ಮಳೆಸುರಿಸಿ, ಬಾಯ್ದೆರೆದಿದ್ದ ನಿನ್ನ ಸ್ವತ್ತನ್ನು ಶಾಂತಪಡಿಸಿದಿ.

[10] ನಿನ್ನ ಪ್ರಜಾಮಂಡಲಿಯು ಅದರಲ್ಲಿ ವಾಸಮಾಡಿತು. ದೇವರೇ, ನೀನು ದಯಾಪರನಾಗಿ ದರಿದ್ರರಿಗೆ ಬೇಕಾದದ್ದೆಲ್ಲವನ್ನು ಒದಗಿಸಿಕೊಟ್ಟಿ.

[11] ಕರ್ತನು ಆಜ್ಞಾಪಿಸಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.

[12] ಓಡಿ ಹೋಗುತ್ತಾರೆ; ಸೈನ್ಯದೊಡನೆ ಅರಸುಗಳು ಓಡಿ ಹೋಗುತ್ತಾರೆ; ಮನೆಯಲ್ಲಿದ್ದ ಸ್ತ್ರೀಯರು ಕೊಳ್ಳೆಯನ್ನು ಹಂಚುತ್ತಾರೆ.

[13] ನೀವು ಕುರಿಹಟ್ಟಿಗಳಲ್ಲಿ ಮಲಗಿಕೊಂಡಿರುವುದೇನು? ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಥಳಥಳಿಸುತ್ತವೆ.

[14] ಸರ್ವಶಕ್ತನು ಅಲ್ಲಿ ರಾಜರನ್ನು ಚದುರಿಸಿದಾಗ, ಸಲ್ಮೋನಿನ ಮೇಲೆ ಹಿಮವು ಬಿದ್ದಿತು.

[15] ಬಾಷಾನಿನ ಪರ್ವತವು ಮಹೋನ್ನತವಾಗಿದೆ; ಆ ಬಾಷಾನ್ ಗಿರಿಯು ಶಿಖರಗಳುಳ್ಳದ್ದೇ.

[16] ಎಲೈ, ಶಿಖರೋನ್ನತಪರ್ವತಗಳೇ, ದೇವರು ತನ್ನ ನಿವಾಸಕ್ಕಾಗಿ ಆರಿಸಿಕೊಂಡಿರುವ ಈ ಪರ್ವತವನ್ನು ನೀವು ಓರೆಗಣ್ಣಿನಿಂದ ನೋಡುವುದೇಕೆ? ಯೆಹೋವನು ಸದಾಕಾಲವೂ ಇದರಲ್ಲೇ ವಾಸಿಸುವನು.

[17] ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತನಾದ ಯೆಹೋವನು ಅವುಗಳ ಸಮೇತವಾಗಿ, ಸೀನಾಯ್ ಬೆಟ್ಟದಿಂದ ಪವಿತ್ರಾಲಯಕ್ಕೆ ಬಂದಿದ್ದಾನೆ.

[18] ನೀನು ಜಯಿಸಿದ ಬಹು ಜನರನ್ನು ಸೆರೆಹಿಡಿದುಕೊಂಡು ಹೋಗಿ, ನಿನಗೆ ದ್ರೋಹಿಗಳಾದ ಮನುಷ್ಯರಿಂದಲೇ ಕಪ್ಪಗಳನ್ನು ಸಂಗ್ರಹಿಸಿ, ದೇವನಾದ ಯಾಹುವು ಅಲ್ಲೇ ವಾಸಿಸುವಂತೆ, ಉನ್ನತಸ್ಥಾನಕ್ಕೆ ಏರಿದ್ದೀ.

[19] ಅನುದಿನವೂ ನಮ್ಮ ಭಾರವನ್ನು ಹೊರುತ್ತಿರುವ ಕರ್ತನಿಗೆ ಸ್ತೋತ್ರವಾಗಲಿ. ನಮ್ಮನ್ನು ರಕ್ಷಿಸುವ ದೇವರು ಆತನೇ. ಸೆಲಾ

[20] ನಮ್ಮ ದೇವರು ನಮ್ಮನ್ನು ವಿಮೋಚಿಸುವುದಕ್ಕೋಸ್ಕರ ದೇವರಾಗಿದ್ದಾನೆ; ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.

[21] ಆಹಾ, ಆತನು ತನ್ನ ವೈರಿಗಳ ಶಿರಸ್ಸುಗಳನ್ನೂ, ಸ್ವೇಚ್ಛೆಯಿಂದ ಪಾಪದಲ್ಲಿ ಪ್ರವರ್ತಿಸುವವರ ತುಂಬುಗೂದಲಿನ ತಲೆಗಳನ್ನೂ ಒಡೆದು ನಿರ್ಮೂಲ ಮಾಡುವನು.

[22] ಕರ್ತನು, “ನಾನು ಅವರನ್ನು ಬಾಷಾನಿನಿಂದಲೂ, ಸಮುದ್ರ ತಳದಿಂದಲೂ ಹಿಡಿದು ತರುವೆನು.

[23] ಆಗ ನೀನು ನಿನ್ನ ಶತ್ರುಗಳ ರಕ್ತದಲ್ಲಿ ಕಾಲಾಡಿಸುವಿ. ನಿನ್ನ ನಾಯಿಗಳ ನಾಲಿಗೆಗಳಿಗೆ ವೈರಿಗಳ ದೇಹದಲ್ಲಿ ಪಾಲುಸಿಕ್ಕುವುದು” ಎಂದು ನುಡಿದನು.

[24] ದೇವರೇ, ನಿನ್ನ ಮೆರವಣಿಗೆ ಶೋಭಿಸುತ್ತದೆ; ನನ್ನ ಅರಸನಾದ ದೇವರು ತನ್ನ ಪರಿಶುದ್ಧಾಲಯಕ್ಕೆ ಮೆರವಣಿಗೆಯಾಗಿ ಪ್ರವೇಶಿಸುತ್ತಾನೆ.

[25] ಮುಂಭಾಗದಲ್ಲಿ ಹಾಡುವವರೂ, ಹಿಂಭಾಗದಲ್ಲಿ ವಾದ್ಯಬಾರಿಸುವವರೂ, ಸುತ್ತಲೂ ದಮ್ಮಡಿಬಡಿಯುವ ಸ್ತ್ರೀಯರೂ ಹೋಗುತ್ತಾ,

[26] “ಇಸ್ರಾಯೇಲ್ ವಂಶಸ್ಥರೇ, ಸಮೂಹವಾಗಿ ದೇವರಾದ ಕರ್ತನನ್ನು ಕೊಂಡಾಡಿರಿ” ಎಂದು ಹಾಡುತ್ತಾರೆ.

[27] ಅಲ್ಲಿ ಎಲ್ಲರಿಗೆ ನಾಯಕರಾಗಿರುವ ಬೆನ್ಯಾಮೀನ್ ಎಂಬ ಸಣ್ಣ ಗೋತ್ರದವರೂ, ಗುಂಪಾಗಿ ಬರುವ ಯೆಹೂದ ಕುಲದ ಪ್ರಭುಗಳೂ, ಜೆಬುಲೂನ್, ನಫ್ತಾಲಿ ಗೋತ್ರಗಳ ಪ್ರಧಾನರೂ ಇದ್ದಾರೆ.

[28] ದೇವರೇ, ನಿನ್ನ ಪ್ರತಾಪವನ್ನು ಆಜ್ಞಾಪಿಸು. ನಿನ್ನ ಮಂದಿರದಲ್ಲಿ ಆಸೀನನಾಗಿ ನಮಗೋಸ್ಕರ ಮಹತ್ಕಾರ್ಯಗಳನ್ನು ನಡೆಸಿದ ದೇವರೇ, ನಿನ್ನ ಬಲವನ್ನು ಪ್ರಕಟಿಸು.

[29] ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ.

[30] ಆಪಿನೊಳಗೆ ವಾಸಿಸುವ ನೀರಾನೆ, ಕರುಗಳ ಸಹಿತವಾದ ಹೋರಿಗಳ ಗುಂಪು, ಇವುಗಳಂತಿರುವ ಶತ್ರುಜನಾಂಗಗಳನ್ನು ಬೆದರಿಸು. ಅವು ಬೆಳ್ಳಿಗಟ್ಟಿಗಳನ್ನು ತಂದು ನಿನಗೆ ಅಡ್ಡಬೀಳಲಿ. ಯುದ್ಧಾಸಕ್ತ ಜನಾಂಗಗಳನ್ನು ಚದುರಿಸಿಬಿಡು.

[31] ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.

[32] ಭೂರಾಜ್ಯಗಳೇ, ದೇವರಿಗೆ ಗಾಯನಮಾಡಿರಿ; ಕರ್ತನನ್ನು ಸಂಕೀರ್ತಿಸಿರಿ. ಸೆಲಾ

[33] ಅನಾದಿಕಾಲದಿಂದಿರುವ ಮಹೋನ್ನತಾಕಾಶದಲ್ಲಿ ವಾಹನಾರೂಢನಾಗಿ ಇರುವಾತನನ್ನು ಸ್ತುತಿಸಿರಿ. ಕೇಳಿರಿ; ಆತನ ಗರ್ಜನೆಯು ಮಹಾಘೋರವಾದದ್ದು.

[34] ದೇವರ ಪ್ರತಾಪವನ್ನು ಕೊಂಡಾಡಿರಿ. ಆತನ ಗಾಂಭೀರ್ಯವು ಇಸ್ರಾಯೇಲರ ಆಶ್ರಯವಾಗಿದೆ; ಆತನ ಶಕ್ತಿಯು ಮೇಘಮಾರ್ಗದಲ್ಲೆಲ್ಲಾ ವ್ಯಾಪಿಸಿದೆ.

[35] ದೇವರೇ, ಪರಿಶುದ್ಧಾಲಯದಲ್ಲಿರುವ ನೀನು ಮಹಾಭಯಂಕರನು. ಇಸ್ರಾಯೇಲರ ದೇವರು ತನ್ನ ಪ್ರಜೆಗೆ ಬಲಪರಾಕ್ರಮಗಳನ್ನು ದಯಪಾಲಿಸುವನು. ದೇವರಿಗೆ ಸ್ತೋತ್ರ.

ಕೀರ್ತನೆಗಳು — Chapters