Skip to content
Opens in a new window
Listen to this chapter • 1:33

[1] ಯೆಹೋವನೇ, ಕೋಪದಿಂದ ನನ್ನನ್ನು ಗದರಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ.

[2] ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ. ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ಅದುರುತ್ತವೆ.

[3] ನನ್ನ ಪ್ರಾಣವು ಸಹ ಬಹಳವಾಗಿ ತತ್ತರಿಸುತ್ತದೆ. ಯೆಹೋವನೇ, ಎಷ್ಟರ ವರೆಗೆ ನನ್ನನ್ನು ಕೈಬಿಟ್ಟಿರುವಿ?

[4] ಯೆಹೋವನೇ, ಹಿಂತಿರುಗು, ನನ್ನನ್ನು ಬಿಡಿಸು; ನಿನ್ನ ಕೃಪೆಯ ನಿಮಿತ್ತ ನನ್ನನ್ನು ರಕ್ಷಿಸು.

[5] ಮೃತರಿಗೆ ನಿನ್ನ ಜ್ಞಾಪಕವಿರುವುದಿಲ್ಲವಲ್ಲಾ; ಪಾತಾಳದಲ್ಲಿ ನಿನ್ನನ್ನು ಸ್ತುತಿಸುವವರು ಯಾರು?

[6] ನಾನು ನರಳಿ ನರಳಿ ದಣಿದಿದ್ದೇನೆ; ಪ್ರತಿರಾತ್ರಿಯೂ ನನ್ನ ಮಂಚವು ಕಣ್ಣೀರಿನಿಂದ ತೇಲಾಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನದುಹೋಗುತ್ತದೆ.

[7] ದುಃಖದಿಂದ ನನ್ನ ಕಣ್ಣು ಬತ್ತಿ ಹೋಯಿತು; ವಿರೋಧಿಗಳ ಬಾಧೆಯ ದೆಸೆಯಿಂದಲೇ ಅವು ಮೊಬ್ಬಾಯಿತು.

[8] ಧರ್ಮವನ್ನು ಮೀರಿ ನಡೆಯುವವರೇ, ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ; ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.

[9] ಆತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನಲ್ಲಾ; ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.

[10] ನನ್ನ ವಿರೋಧಿಗಳೆಲ್ಲರು ನಾಚಿಕೆಯಿಂದ ಕಳವಳಗೊಳ್ಳುವರು; ಅವರು ಪಕ್ಕನೆ ಲಜ್ಜೆಗೊಂಡು ಹಿಂದಿರುಗುವರು.

ಕೀರ್ತನೆಗಳು — Chapters