[1] ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ; ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.
[2] ಅನೇಕರು ನನ್ನ ವಿಷಯದಲ್ಲಿ, “ಅವನಿಗೆ ದೇವರಿಂದ ಸಹಾಯವು ಆಗುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ. ಸೆಲಾ
[3] ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ; ನೀನು ನನ್ನ ಗೌರವಕ್ಕೆ ಆಧಾರನೂ, ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.
[4] ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ, ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. ಸೆಲಾ.
[5] ಯೆಹೋವನು ನನ್ನನ್ನು ಕಾಪಾಡುವವನು, ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.
[6] ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.
[7] ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.
[8] ಜಯವು ಯೆಹೋವನಿಂದಲೇ ಉಂಟಾಗುವುದು. ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ. ಸೆಲಾ.