Skip to content
Opens in a new window
Listen to this chapter • 1:33

[1] ಪರಾಕ್ರಮಿಯೇ, ನೀನು ಕೆಡುಕುಮಾಡಿ ಹಿಗ್ಗುವುದೇನು? ದೇವರ ಕೃಪೆಯು ಯಾವಾಗಲೂ ಇರುವುದು.

[2] ಮೋಸಗಾರನೇ, ನಿನ್ನ ನಾಲಿಗೆಯು ಹರಿತವಾದ ಕ್ಷೌರಕತ್ತಿಯಂತೆ ಅಪಾಯಗಳನ್ನೇ ಕಲ್ಪಿಸುತ್ತದೆ.

[3] ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; ನೀತಿಯನ್ನು ಬಿಟ್ಟು ಅನೀತಿಯನ್ನು ಸ್ಥಾಪಿಸುವುದೇ ನಿನಗೆ ಸಂತೋಷ. ಸೆಲಾ

[4] ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.

[5] ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿಬಿಡುವನು; ನಿನ್ನನ್ನು ಹಿಡಿದು ಗುಡಾರದೊಳಗಿಂದ ಕಿತ್ತು ಬೀಸಾಡುವನು; ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು.

[6] ನೀತಿವಂತರು ಅದನ್ನು ನೋಡಿ ಭಯಪಡುವರು; ಅವರು ಪರಿಹಾಸ್ಯಮಾಡುತ್ತಾ,

[7] “ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ, ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು, ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ” ಎಂದು ಹೇಳುವರು.

[8] ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.

[9] ದೇವರೇ, ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಹೊಗಳುವೆನು.

ಕೀರ್ತನೆಗಳು — Chapters