[1] ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ.
[2] ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು.
[3] ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ; ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟುಹೋಗುತ್ತವೆ.
[4] ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು.
[5] ನಿಟ್ಟುಸಿರಿನಿಂದ ನನ್ನಲ್ಲಿ ಎಲುಬು, ತೊಗಲು ಮಾತ್ರ ಉಳಿದಿರುತ್ತವೆ.
[6] ಅಡವಿಯ ಬಕಪಕ್ಷಿಯಂತಿದ್ದೇನೆ; ಹಾಳೂರಿನ ಗೂಬೆಯಂತಿದ್ದೇನೆ.
[7] ನಿದ್ರೆಯಿಲ್ಲದವನಾಗಿ ಮನೆಮಾಳಿಗೆಯ ಮೇಲಿರುವ, ಒಂಟಿಯಾದ ಪಕ್ಷಿಯಂತಿದ್ದೇನೆ.
[8] ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ, ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ.
[9] ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ಮಿಶ್ರವಾಯಿತು.
[10] ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ!
[11] ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ.
[12] ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು.
[13] ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತ ಕಾಲವು ಬಂದಿದೆ.
[14] ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ, ಅದು ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.
[15] ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ,
[16] ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ,
[17] ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು.
[18] ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ,
[19] “ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ.
[20] ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ,
[21] ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ.
[22] ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು.
[23] ಆತನು ಯೌವನಪ್ರಾಯದಲ್ಲಿಯೇ ನನ್ನ ಬಲವನ್ನು ಕುಂದಿಸಿದ್ದಾನೆ;
[24] ನನ್ನ ಆಯುಷ್ಯವನ್ನು ಕಡಿಮೆ ಮಾಡಿಬಿಟ್ಟಿದ್ದಾನೆ. ಆದುದರಿಂದ, “ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರ್ಷಗಳು ತಲತಲಾಂತರಕ್ಕೂ ಇರುತ್ತವೆ.
[25] ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
[26] ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.
[27] ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.
[28] ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ.