Skip to content
Opens in a new window
Listen to this chapter • 1:27

[1] ದೇವರೇ, ನನ್ನ ಸ್ವರವನ್ನು ಕೇಳಿ, ಶತ್ರುಭಯದಿಂದ ನನ್ನ ಜೀವವನ್ನು ರಕ್ಷಿಸು.

[2] ದುಷ್ಟರ ಒಳಸಂಚಿಗೂ, ಕೆಡುಕರ ಗುಪ್ತ ಆಲೋಚನೆಗೂ ಸಿಕ್ಕದಂತೆ, ನನ್ನನ್ನು ತಪ್ಪಿಸಿ ಭದ್ರಪಡಿಸು.

[3] ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ; ವಿಷವಚನವೆಂಬ ಬಾಣವನ್ನು ಹೂಡಿದ್ದಾರೆ.

[4] ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ. ಸ್ವಲ್ಪವೂ ಹೆದರದೆ ಅವನ ಮೇಲೆ ಫಕ್ಕನೆ ಎಸೆಯುತ್ತಾರೆ.

[5] ದುಷ್ಕೃತ್ಯಕ್ಕಾಗಿ ಮನಸ್ಸನ್ನು ದೃಢಪಡಿಸಿಕೊಂಡು ತಮ್ಮೊಳಗೆ, “ರಹಸ್ಯವಾಗಿ ಬಲೆಗಳನ್ನು ಒಡ್ಡೋಣ; ನಮ್ಮನ್ನು ನೋಡುವವರು ಯಾರು?” ಅಂದುಕೊಳ್ಳುತ್ತಾರೆ.

[6] ಅವರು, “ಕೇಡನ್ನು ಕಲ್ಪಿಸಿ, ಒಳ್ಳೆಯ ಉಪಾಯವನ್ನು ಕಂಡುಕೊಂಡಿದ್ದೇವೆ” ಅಂದುಕೊಳ್ಳುತ್ತಾರೆ; ಅವರ ಹೃದಯವೂ, ಅಂತರಂಗದ ಆಲೋಚನೆಯೂ ಅಶೋಧ್ಯವಾಗಿವೆ.

[7] ಆದರೆ ದೇವರು ಬಾಣವನ್ನು ಎಸೆಯಲು, ಫಕ್ಕನೆ ಅವರಿಗೆ ಗಾಯವಾಗುವುದು.

[8] ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ ಅವರು ಎಡವಿಬೀಳುವರು; ಆಗ ನೋಡುವವರೆಲ್ಲರು ತಲೆ ಅಲ್ಲಾಡಿಸಿ ಅಣಕಿಸುವರು.

[9] ಎಲ್ಲಾ ಮನುಷ್ಯರು ಭಯಪಟ್ಟು ದೇವರ ಕೆಲಸವೆಂದು ಹೇಳಿ, ಆತನ ಕೃತ್ಯಗಳನ್ನು ಆಲೋಚಿಸಿಕೊಳ್ಳುವರು.

[10] ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು; ಸರಳಹೃದಯದವರೆಲ್ಲರೂ ಹಿಗ್ಗುವರು.

ಕೀರ್ತನೆಗಳು — Chapters