Skip to content
Opens in a new window
Listen to this chapter • 4:09

[1] ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?

[2] ನನ್ನ ದೇವರೇ, ಹಗಲಿನಲ್ಲಿ ಮೊರೆಯಿಡುತ್ತೇನೆ; ಪ್ರತ್ಯುತ್ತರವೇ ಇಲ್ಲ; ರಾತ್ರಿಯಲ್ಲಿಯೂ ನನಗೆ ಉಪಶಮನವಿಲ್ಲ.

[3] ಇಸ್ರಾಯೇಲರ ಸ್ತೋತ್ರಸಿಂಹಾಸನದಲ್ಲಿ ಇರುವಾತನೇ, ನೀನು ಪವಿತ್ರಸ್ವರೂಪನು.

[4] ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು; ನಿನ್ನನ್ನು ನಂಬಿ ಉದ್ಧಾರವಾದರು.

[5] ನಿನಗೆ ಮೊರೆಯಿಟ್ಟು ವಿಮುಕ್ತರಾದರು; ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.

[6] ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.

[7] ನನ್ನನ್ನು ನೋಡುವವರೆಲ್ಲರೂ ಹಾಸ್ಯಮಾಡುತ್ತಾರೆ; ಅವರು ಓರೇ ತುಟಿ ಮಾಡಿ ತಲೆ ಆಡಿಸುತ್ತಾ,

[8] “ಯೆಹೋವನು ತನ್ನನ್ನು ರಕ್ಷಿಸುವನೆಂದು ಆತನಲ್ಲಿ ಭರವಸವಿಟ್ಟಿದ್ದಾನಲ್ಲಾ; ಆತನು ಇವನನ್ನು ಮೆಚ್ಚಿದ್ದಾದರೆ ರಕ್ಷಿಸಲಿ” ಎಂದು ಹೇಳುತ್ತಾರೆ.

[9] ತಾಯಿಯ ಗರ್ಭದೊಳಗಿಂದ ನನ್ನನ್ನು ಬರಮಾಡಿದವನು ನೀನೇ ಅಲ್ಲವೇ. ತಾಯಿಯ ಎದೆಯಲ್ಲಿ ನನ್ನನ್ನು ನಿಶ್ಚಿಂತೆಯಿಂದ ಇರಿಸಿದವನು ನೀನೇ ಅಲ್ಲವೇ.

[10] ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ.

[11] ನನಗೀಗ ಕಷ್ಟವು ಪ್ರಾಪ್ತವಾಗಿದೆ; ಸಹಾಯಕರು ಯಾರೂ ಇಲ್ಲ, ದೂರವಾಗಿರಬೇಡ.

[12] ಬಹಳ ಗೂಳಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವುಳ್ಳ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.

[13] ಅವರು ಗರ್ಜಿಸುವ ಉಗ್ರಸಿಂಹಗಳಂತೆ ನನ್ನನ್ನು ನುಂಗುವುದಕ್ಕೆ ಬಾಯಿ ತೆರೆದಿದ್ದಾರೆ.

[14] ನಾನು ಹೊಯ್ಯಲ್ಪಟ್ಟ ನೀರಿನಂತಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿದೆ. ನನ್ನ ಹೃದಯ ಮೇಣದಂತೆ ನನ್ನಲ್ಲಿ ಕರಗಿಹೋಗಿದೆ.

[15] ನನ್ನ ಶಕ್ತಿಯು ಬೋಕಿಯ ಹಾಗೆ ಒಣಗಿಹೋಗಿದೆ; ನನ್ನ ನಾಲಿಗೆಯು ಬಾಯಿಯ ಅಂಗಳಕ್ಕೆ ಹತ್ತಿಹೋಗಿದೆ. ನೀನು ನನ್ನನ್ನು ಮಣ್ಣಿಗೆ ಸೇರಿಸುತ್ತೀ.

[16] ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ. ನನ್ನ ಕೈಕಾಲುಗಳನ್ನು ತಿವಿದಿದ್ದಾರೆ.

[17] ನನ್ನ ಎಲುಬುಗಳನ್ನೆಲ್ಲಾ ಎಣಿಸುವುದಕ್ಕಾಗುವುದು; ಅವರೋ ನನ್ನನ್ನು ನೋಡಿ ನೋಡಿ ಹಿಗ್ಗುತ್ತಾರೆ.

[18] ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗಾಗಿ ಚೀಟುಹಾಕುತ್ತಾರೆ.

[19] ಯೆಹೋವನೇ, ನನ್ನ ರಕ್ಷಕನೇ, ನೀನಾದರೋ ದೂರವಾಗಿರಬೇಡ; ಬೇಗ ಬಂದು ಸಹಾಯಮಾಡು.

[20] ಕತ್ತಿಗೆ ಸಿಕ್ಕದಂತೆ ನನ್ನನ್ನು ತಪ್ಪಿಸು; ನನ್ನ ಪ್ರಿಯ ಪ್ರಾಣವು ನಾಯಿಯ ವಶವಾಗದಂತೆ ಕಾಪಾಡು.

[21] ಸಿಂಹಗಳ ಬಾಯಿಂದ ರಕ್ಷಿಸು, ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸು.

[22] ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.

[23] ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ; ಯಾಕೋಬ ವಂಶದವರೇ, ನೀವೆಲ್ಲರೂ ಆತನನ್ನು ಕೊಂಡಾಡಿರಿ. ಇಸ್ರಾಯೇಲ್ ವಂಶಸ್ಥರೇ, ನೀವೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ.

[24] ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ, ಅವನ ಪ್ರಾರ್ಥನೆಗೆ ಕಿವಿಗೊಟ್ಟನು.

[25] ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು; ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.

[26] ದೀನರು ಉಂಡು ತೃಪ್ತರಾಗುವರು; ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು. ಅವರ ಅಂತರಾತ್ಮವು ಯಾವಾಗಲು ಚೈತನ್ಯವುಳ್ಳದ್ದಾಗಿರಲಿ.

[27] ಭೂಮಂಡಲದವರೆಲ್ಲರೂ ಎಚ್ಚರಗೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳುವರು; ಯೆಹೋವನೇ, ಎಲ್ಲಾ ಜನಾಂಗಗಳವರು ನಿನಗೆ ಅಡ್ಡಬೀಳುವರು.

[28] ರಾಜ್ಯವು ಯೆಹೋವನದೇ; ಎಲ್ಲಾ ಜನಾಂಗಗಳಿಗೂ ಆತನೇ ಒಡೆಯನು.

[29] ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಆರಾಧಿಸುವರು; ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣು ಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.

[30] ಆತನನ್ನು ಸೇವಿಸುವವರ ಸಂತಾನದವರು ಯೆಹೋವನ ಸಂತಾನದವರೆಂದು ಎಣಿಸಲ್ಪಡವರು.

[31] ಅವರು ಬಂದು ಆತನ ನೀತಿಯನ್ನೂ, ಆತನು ನಡೆಸಿದ ಕಾರ್ಯಗಳನ್ನೂ ಮುಂದೆ ಹುಟ್ಟುವ ಜನಕ್ಕೆ ತಿಳಿಸುವರು.

ಕೀರ್ತನೆಗಳು — Chapters