[1] ನನ್ನ ಜನರೇ, ನನ್ನ ಉಪದೇಶವನ್ನು ಕೇಳಿರಿ; ನನ್ನ ನುಡಿಗಳನ್ನು ಕಿವಿಗೊಟ್ಟು ಲಾಲಿಸಿರಿ.
[2] ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು. ಪೂರ್ವಕಾಲದ ಗೂಢಾರ್ಥಗಳನ್ನು ಬಹಿರಂಗಪಡಿಸುವೆನು.
[3] ನಾವು ನಮ್ಮ ಹಿರಿಯರ ಬಾಯಿಂದ ತಿಳಿದ ಸಂಗತಿಗಳನ್ನು, ಅವರ ಸಂತಾನದವರಿಗೆ ಮರೆಮಾಡದೆ,
[4] ಯೆಹೋವನ ಘನತೆಯನ್ನು, ಆತನ ಪರಾಕ್ರಮವನ್ನು, ಅದ್ಭುತಕೃತ್ಯಗಳನ್ನು ಮುಂದಣ ಸಂತತಿಯವರಿಗೆ ವಿವರಿಸುವೆವು.
[5] ಆತನು ಯಾಕೋಬವಂಶದಲ್ಲಿ ತನ್ನ ಕಟ್ಟಳೆಯನ್ನಿಟ್ಟು, ಇಸ್ರಾಯೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟು, ನಮ್ಮ ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, “ಇವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ;
[6] ಇದರಿಂದ ಅವು ಅವರ ಮುಂದಿನ ಪೀಳಿಗೆಗೆ ಗೊತ್ತಾಗಿ, ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.
[7] ಆಗ ಅವರು ಮೊಂಡರೂ, ಅವಿಧೇಯರೂ, ಚಪಲಚಿತ್ತರೂ, ದೇವದ್ರೋಹಿಗಳೂ ಆದ ತಮ್ಮ ಪೂರ್ವಿಕರಂತೆ ಆಗದೆ,
[8] ನನ್ನ ಮಹತ್ಕಾರ್ಯಗಳನ್ನು ಮರೆಯದೆ, ನನ್ನಲ್ಲಿಯೇ ಭರವಸೆಯಿಟ್ಟು, ನನ್ನ ಆಜ್ಞೆಗಳನ್ನು ಕೈಗೊಳ್ಳುವರು” ಎಂಬುದೇ.
[9] ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸಿದ್ಧರಾಗಿ, ಯುದ್ಧಸಮಯದಲ್ಲಿ ಹಿಂದಿರುಗಿ ಓಡಿಹೋದರು.
[10] ಅವರು ದೇವರ ನಿಬಂಧನೆಯನ್ನು ಪಾಲಿಸಲಿಲ್ಲ, ಆತನ ಧರ್ಮಶಾಸ್ತ್ರವನ್ನು ಅನುಸರಿಸಲು ಮನಸ್ಸು ಮಾಡಲಿಲ್ಲ.
[11] ಆತನ ಕಾರ್ಯಗಳನ್ನು, ಆತನು ತಮ್ಮೆದುರಿನಲ್ಲಿ ನಡೆಸಿದ ಅದ್ಭುತಗಳನ್ನು ಮರೆತುಬಿಟ್ಟರು.
[12] ಆತನು ಐಗುಪ್ತದೇಶದ ಸೋನ್ ಸೀಮೆಯಲ್ಲಿ, ಅವರ ಪೂರ್ವಿಕರ ಸಮಕ್ಷದಲ್ಲಿಯೇ ಆಶ್ಚರ್ಯ ಕ್ರಿಯೆಗಳನ್ನು ನಡೆಸಿದನು.
[13] ಆತನು ಸಮುದ್ರವನ್ನು ವಿಭಾಗಿಸಿ, ಅದರ ನೀರನ್ನು ರಾಶಿಯಾಗಿ ನಿಲ್ಲುವಂತೆ ಮಾಡಿ, ಅವರನ್ನು ದಾಟಿಸಿದನು.
[14] ಹಗಲಿನಲ್ಲಿ ಮೋಡದಿಂದಲೂ, ರಾತ್ರಿಯಲ್ಲಿ ಬೆಂಕಿಯ ಬೆಳಕಿನಿಂದಲೂ, ಆತನು ಅವರನ್ನು ಕರೆದೊಯ್ದನು.
[15] ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ, ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು.
[16] ಗಿರಿಶಿಲೆಯಿಂದ ಜಲಪ್ರವಾಹಗಳನ್ನು ಹೊರಡಿಸಿ, ನದಿಗಳಾಗಿ ಹರಿಯಮಾಡಿದನು.
[17] ಆದರೂ ಅವರು ನಿರ್ಜಲಪ್ರದೇಶದಲ್ಲಿ ಪರಾತ್ಪರನಾದ ದೇವರಿಗೆ ಪದೇಪದೇ ಅವಿಧೇಯರಾಗಿ, ಇನ್ನೂ ಹೆಚ್ಚು ಪಾಪಮಾಡುತ್ತಾ ಬಂದರು.
[18] ಅವರು ಇಷ್ಟಭೋಜನವನ್ನು ಕೇಳಿಕೊಳ್ಳುವಾಗ, ಸಂಶಯ ಮನಸ್ಸಿನಿಂದ ದೇವರನ್ನು ಪರೀಕ್ಷಿಸಿದರು.
[19] ಅವರು ಆತನಿಗೆ ವಿರುದ್ಧವಾಗಿ ಹೇಳಿದ್ದೇನೆಂದರೆ, “ದೇವರು ಅರಣ್ಯದಲ್ಲಿ ಊಟಕ್ಕೆ ಬಡಿಸಬಲ್ಲನೋ?
[20] ಬಂಡೆಯನ್ನು ಹೊಡೆದು, ನೀರು ಚಿಮ್ಮಿ ಹೊರಗೆ ಬರುವಂತೆಯೂ, ಪ್ರವಾಹವು ದಡಮೀರಿ ಹರಿಯುವಂತೆಯೂ ಮಾಡಿದನಲ್ಲವೋ? ಆತನು ರೊಟ್ಟಿಯನ್ನು ಕೊಡಲು ಶಕ್ತನೋ? ತನ್ನ ಜನರಿಗೆ ಮಾಂಸವನ್ನೂ ಒದಗಿಸುವನೋ” ಎಂಬುದೇ.
[21] ಯೆಹೋವನು ಇದನ್ನು ಕೇಳಿ ರೋಷಗೊಂಡನು. ಅವರು ದೇವರಲ್ಲಿ ಭರವಸವಿಡದೆಯೂ, ಆತನ ರಕ್ಷಣೆಯನ್ನು ನಂಬದೆ ಹೋದುದರಿಂದಲೂ,
[22] ಆತನಿಗೆ ಇಸ್ರಾಯೇಲರ ಮೇಲೆ ಕೋಪವುಂಟಾಯಿತು; ಯಾಕೋಬ್ ವಂಶದವರಲ್ಲಿ ಬೆಂಕಿ ಹತ್ತಿತು.
[23] ಆತನು ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು,
[24] ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ, ಉಣ್ಣಲಿಕ್ಕೆ ಕೊಟ್ಟನು.
[25] ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು. ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು.
[26] ಆತನು ಗಗನಮಂಡಲದಲ್ಲಿ ಮೂಡಣ ಗಾಳಿಯನ್ನು ಉಂಟುಮಾಡಿ, ಪ್ರತಾಪದಿಂದ ತೆಂಕಣ ಗಾಳಿಯನ್ನೂ ಹೊಡೆದುಕೊಂಡು ಬಂದು,
[27] ಧೂಳಿನಷ್ಟು ಮಾಂಸವೃಷ್ಟಿಯನ್ನು ಸುರಿಸಿದನು; ಸಮುದ್ರದ ಮರಳಿನಷ್ಟು ಪಕ್ಷಿಗಳು ಅವರಿದ್ದಲ್ಲಿ ಬೀಳುವಂತೆ ಮಾಡಿದನು.
[28] ಅವು ಪಾಳೆಯದ ಮಧ್ಯದಲ್ಲಿಯೇ ಅವರ ಬಿಡಾರಗಳ ಸುತ್ತಲೂ ಬಿದ್ದವು.
[29] ಅವರು ತಿಂದು ಸಂತೃಪ್ತರಾದರು; ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.
[30] ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು, ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
[31] ದೇವರ ಕೋಪವು ಅವರಿಗೆ ವಿರುದ್ಧವಾಗಿ ಎದ್ದು, ಅವರಲ್ಲಿ ಕೊಬ್ಬಿದವರನ್ನು ವಧಿಸಿ, ಇಸ್ರಾಯೇಲರ ಪ್ರಾಯಸ್ಥರನ್ನು ನೆಲಕ್ಕುರುಳಿಸಿತು.
[32] ಇಷ್ಟಾದರೂ ಪುನಃ ಪುನಃ ಪಾಪಮಾಡುತ್ತಾ ಬಂದರು; ಅವರು ಆತನ ಅದ್ಭುತಕೃತ್ಯಗಳನ್ನು ನಂಬದೆ ಹೋದರು.
[33] ಆದುದರಿಂದ ಆತನು ಅವರ ಜೀವಿತ ದಿನಗಳನ್ನು ಉಸಿರಿನಂತೆಯೂ, ಅವರ ವರ್ಷಗಳನ್ನು ಭಯದಿಂದಲೂ ಮುಗಿಸಿದನು.
[34] ಸಂಹಾರವಾಗುವಾಗೆಲ್ಲಾ ಅವರು ದೇವರನ್ನು ನೆನಸಿ, ಪುನಃ ಆತನ ಪ್ರಸನ್ನತೆಯನ್ನು ಬಯಸಿ,
[35] ದೇವರು ತಮ್ಮ ಬಂಡೆಯು, ಪರಾತ್ಪರನಾದ ದೇವರು, ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.
[36] ಆದರೆ ಅವರು ಆತನನ್ನು ತಮ್ಮ ಬಾಯಿಂದ ವಂಚಿಸಿ, ತಮ್ಮ ನಾಲಿಗೆಯಿಂದ ಸುಳ್ಳಾಡಿದರು.
[37] ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ.
[38] ಆದರೂ ಆತನು ಕರುಣಾಳುವೂ, ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ, ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.
[39] ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.
[40] ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ, ಅಲ್ಲಿ ಆತನನ್ನು ನೋಯಿಸಿದರು.
[41] ಆತನನ್ನು ಪದೇಪದೇ ಪರೀಕ್ಷಿಸಿ, ಇಸ್ರಾಯೇಲರ ಸದಮಲಸ್ವಾಮಿಯನ್ನು ಕೋಪಕ್ಕೆ ಗುರಿಮಾಡಿದರು.
[42] ಅವರು ಆತನ ಭುಜಬಲವನ್ನೂ, ತಮ್ಮನ್ನು ಶತ್ರುಗಳಿಂದ ಬಿಡಿಸಿದ ಸಮಯವನ್ನೂ,
[43] ಆತನು ಐಗುಪ್ತದಲ್ಲಿ ಮಾಡಿದ ಮಹತ್ಕಾರ್ಯಗಳನ್ನು, ಸೋನ್ ಸೀಮೆಯಲ್ಲಿ ನಡೆಸಿದ ಅದ್ಭುತಗಳನ್ನೂ ಮರೆತುಬಿಟ್ಟರು.
[44] ಅವರು ಹಳ್ಳದ ನೀರನ್ನು ಕುಡಿಯಲಾಗದಂತೆ, ಆತನು ಅಲ್ಲಿನ ನದಿಗಳನ್ನು ರಕ್ತವನ್ನಾಗಿ ಮಾರ್ಪಡಿಸಿದನು.
[45] ಅವರನ್ನು ನಾಶಮಾಡುವ ವಿಷದ ಹುಳಗಳನ್ನು, ಹಾಳುಮಾಡುವ ಕಪ್ಪೆಗಳನ್ನು ಕಳುಹಿಸಿಕೊಟ್ಟನು.
[46] ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ, ಕಷ್ಟಫಲವನ್ನು ಮಿಡತೆಗಳಿಗೂ ಕೊಟ್ಟುಬಿಟ್ಟನು.
[47] ಅವರ ದ್ರಾಕ್ಷಾಲತೆಗಳನ್ನು ಆನೆಕಲ್ಲಿನಿಂದಲೂ, ಅತ್ತಿಮರಗಳನ್ನು ಕಲ್ಮಳೆಯಿಂದಲೂ ಹಾಳುಮಾಡಿದನು.
[48] ಅವರ ದನಗಳನ್ನು ಕಲ್ಮಳೆಗೂ, ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
[49] ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
[50] ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ, ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.
[51] ಹಾಮನ ವಂಶದವರ ಪ್ರಥಮಫಲವಾಗಿರುವ ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು.
[52] ಆತನು ಕುರಿಗಳನ್ನೋ ಎಂಬಂತೆ ತನ್ನ ಜನವನ್ನು ಹೊರತಂದು, ಅಡವಿಯಲ್ಲಿ ಹಿಂಡನ್ನು ಪೋಷಿಸಿ ನಡೆಸಿದನು.
[53] ಆತನು ಸುರಕ್ಷಿತವಾಗಿ ನಡೆಸಿದ್ದರಿಂದ ಅವರು ಭಯಪಡಲಿಲ್ಲ; ಅವರ ಶತ್ರುಗಳನ್ನು ಸಮುದ್ರವು ಮುಚ್ಚಿಬಿಟ್ಟಿತು;
[54] ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.
[55] ಜನಾಂಗಗಳನ್ನು ಅವರ ಮುಂದಿನಿಂದ ಓಡಿಸಿಬಿಟ್ಟು, ಅವರ ದೇಶವನ್ನು ಇಸ್ರಾಯೇಲ್ ಗೋತ್ರಗಳಿಗೆ ಸ್ವತ್ತಾಗಿರುವಂತೆ ಹಂಚಿಕೊಟ್ಟು, ಆ ಜನಾಂಗಗಳ ಬಿಡಾರಗಳಲ್ಲಿ ಅವರನ್ನು ನೆಲೆಗೊಳಿಸಿದನು.
[56] ಆದರೂ ಅವರು ಪರಾತ್ಪರನಾದ ದೇವರನ್ನು ಪರೀಕ್ಷಿಸಿ ಅವಿಧೇಯರಾದರು. ಆತನ ವಿಧಿಗಳನ್ನು ಕೈಗೊಳ್ಳದೆ,
[57] ಆತನಿಗೆ ವಿಮುಖರಾಗಿ ತಮ್ಮ ಹಿರಿಯರಂತೆ ದ್ರೋಹಿಗಳಾದರು. ಮೋಸದ ಬಿಲ್ಲಿನಂತೆ ತಿರುಗಿಕೊಂಡರು.
[58] ಅವರು ತಮ್ಮ ಪೂಜಾಸ್ಥಳಗಳಿಂದ ಆತನನ್ನು ಬೇಸರಗೊಳಿಸಿ, ವಿಗ್ರಹಗಳಿಂದ ರೇಗಿಸಿದರು.
[59] ದೇವರು ಇದನ್ನು ತಿಳಿದು ರೌದ್ರನಾಗಿ ಇಸ್ರಾಯೇಲರನ್ನು ಸಂಪೂರ್ಣವಾಗಿ ನಿರಾಕರಿಸಿಬಿಟ್ಟನು.
[60] ತಾನು ಜನರ ಮಧ್ಯದಲ್ಲಿ ವಾಸಿಸುವುದಕ್ಕೋಸ್ಕರ, ಶಿಲೋವ್ ಪಟ್ಟಣದಲ್ಲಿ ಹಾಕಿಸಿದ ನಿವಾಸಸ್ಥಾನವನ್ನು ತ್ಯಜಿಸಿಬಿಟ್ಟು,
[61] ತನ್ನ ಪ್ರತಾಪವನ್ನು ಸೆರೆಯಾಗುವುದಕ್ಕೂ, ಮಹಿಮೆಯನ್ನು ವಿರೋಧಿಗಳಿಗೂ ಒಪ್ಪಿಸಿಬಿಟ್ಟನು.
[62] ಆತನು ತನ್ನ ಪ್ರಜೆಯನ್ನು ಖಡ್ಗಕ್ಕೆ ಗುರಿಮಾಡಿ, ತನ್ನ ಬಾಧ್ಯತೆಯ ಮೇಲೆ ಉಗ್ರನಾದನು.
[63] ಅವರ ಯೌವನಸ್ಥರು ಅಗ್ನಿಗೆ ಆಹುತಿಯಾದರು; ಅವರ ಕನ್ಯೆಯರು ವಿವಾಹವಾಗಲಿಲ್ಲ.
[64] ಯಾಜಕರು ಕತ್ತಿಯಿಂದ ಸಂಹೃತರಾದರು; ಇವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸಲಿಲ್ಲ.
[65] ಆ ವರೆಗೆ ನಿದ್ರಿಸುವವನಂತೆಯೂ, ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚೆತ್ತು,
[66] ತನ್ನ ಶತ್ರುಗಳನ್ನು ಸದೆಬಡಿದು, ನಿತ್ಯನಿಂದೆಗೆ ಅವರನ್ನು ಗುರಿಮಾಡಿದನು.
[67] ಯೋಸೇಫನ ಕುಲದ ಗುಡಾರವನ್ನು ತಿರಸ್ಕರಿಸಿ, ಎಫ್ರಾಯೀಮ್ ಕುಲವನ್ನು ತ್ಯಜಿಸಿ,
[68] ಯೆಹೂದ ಕುಲವನ್ನೂ ಮತ್ತು ತನ್ನ ಪ್ರಿಯವಾದ ಚೀಯೋನ್ ಗಿರಿಯನ್ನೂ ಆರಿಸಿಕೊಂಡನು.
[69] ಆತನು ತನ್ನ ಆಲಯವನ್ನು ಪರ್ವತದಂತೆಯೂ, ತಾನು ಸ್ಥಾಪಿಸಿದ ಭೂಮಿಯಂತೆಯೂ ಶಾಶ್ವತವಾಗಿ ಕಟ್ಟಿದನು.
[70] ಇದಲ್ಲದೆ ಆತನು ತನ್ನ ಸೇವಕನಾದ ದಾವೀದನನ್ನು ಆರಿಸಿಕೊಂಡು, ಕುರಿಹಟ್ಟಿಯಿಂದ ತೆಗೆದುಕೊಂಡು,
[71] ಕುರಿಮರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ, ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ ತನ್ನ ಸ್ವತ್ತಾಗಿರುವ ಇಸ್ರಾಯೇಲರನ್ನು ಸಾಕುವುದಕ್ಕೆ ನೇಮಿಸಿದನು.
[72] ಇವನು ಅವರನ್ನು ಯಥಾರ್ಥಹೃದಯದಿಂದ ಸಾಕಿ, ತನ್ನ ಹಸ್ತಕೌಶಲ್ಯದಿಂದ ನಡೆಸಿದನು.