[1] ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.
[2] ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು?
[3] ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, ನೀತಿಯನ್ನು ಪಾಲಿಸುವವರೂ ಧನ್ಯರು.
[4] ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,
[5] ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.
[6] ನಮ್ಮ ಪೂರ್ವಿಕರಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡೆಸಿದೆವು.
[7] ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಅವರು ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು.
[8] ಆದರೂ ಆತನು ತನ್ನ ಹೆಸರಿನ ನಿಮಿತ್ತವಾಗಿಯೂ, ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು.
[9] ಆತನು ಗದರಿಸಲು ಕೆಂಪು ಸಮುದ್ರವು ಒಣಗಿಹೋಯಿತು; ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು.
[10] ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; ವೈರಿಯ ಹಸ್ತದಿಂದ ಬಿಡಿಸಿದನು.
[11] ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ.
[12] ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು.
[13] ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು, ಆತನ ನಡೆಸುವಿಕೆಗೆ ಕಾದಿರದೆ,
[14] ಅರಣ್ಯದಲ್ಲಿ ಅತಿ ಆಶೆಗೊಂಡವರಾಗಿ, ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.
[15] ಆತನು ಅವರ ಆಶೆಯನ್ನು ಪೂರೈಸಿದರೂ, ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು.
[16] ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು,
[17] ಭೂಮಿಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು.
[18] ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.
[19] ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು.
[20] ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು.
[21] ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ,
[22] ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು.
[23] ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.
[24] ಅವರು ಆ ರಮಣೀಯ ದೇಶವನ್ನು ತಿರಸ್ಕರಿಸಿದರು, ಆತನ ಮಾತನ್ನು ನಂಬಲಿಲ್ಲ.
[25] ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ, ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.
[26] ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ,
[27] ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದುರಿಸಿ, ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು.
[28] ಅವರು ತಮ್ಮನ್ನು ಬಾಳ್ ಪೆಗೋರನ ಸೇವೆಗೆ ಒಪ್ಪಿಸಿ, ಮೂರ್ತಿಗಳಿಗೆ ಯಜ್ಞ ಮಾಡಿದ್ದನ್ನು ಊಟಮಾಡಿದರು.
[29] ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; ಅವರಲ್ಲಿ ವ್ಯಾಧಿಯುಂಟಾಯಿತು.
[30] ಫೀನೆಹಾಸನು ಎದ್ದು ಅವರನ್ನು ದಂಡಿಸಲು, ಆ ವ್ಯಾಧಿಯು ನಿಂತುಹೋಯಿತು.
[31] ಅವನು ಮಾಡಿದ್ದು ತಲಾತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು.
[32] ಅವರು ಮೆರೀಬ ಪ್ರವಾಹದ ಸಮೀಪದಲ್ಲಿ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡು ಉಂಟಾಯಿತು.
[33] ಅವರು ದೇವರಾತ್ಮನಿಗೆ ವಿರುದ್ಧವಾಗಿ ನಿಂತಿದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
[34] ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, ಯೆಹೋವನ ಆಜ್ಞೆಗೆ ಅವಿಧೇಯರಾಗಿ,
[35] ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು.
[36] ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.
[37] ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.
[38] ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.
[39] ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು.
[40] ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ,
[41] ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. ವೈರಿಗಳು ಅವರ ಮೇಲೆ ಅಧಿಕಾರ ನಡೆಸಿದರು;
[42] ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು.
[43] ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.
[44] ಆದರೆ ಆತನು ಕಷ್ಟದಲ್ಲಿದ್ದ, ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.
[45] ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು, ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು.
[46] ಸೆರೆಯೊಯ್ದವರ ದಯೆಗೆ ಅವರು ಪಾತ್ರರಾಗುವಂತೆ ಮಾಡಿದನು.
[47] ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.
[48] ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!