[1] ದೇವರು ನಿರ್ಮಲಚಿತ್ತರಾದ ಇಸ್ರಾಯೇಲರಿಗೆ ದಯಾಪರನೇ ಹೌದು.
[2] ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.
[3] ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು.
[4] ಅವರ ಮರಣವು ನಿರ್ಬಾಧಕವಾಗಿದೆ; ಅವರ ದೇಹವು ಕೊಬ್ಬಿದೆ.
[5] ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ.
[6] ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ.
[7] ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ.
[8] ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.
[9] ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.
[10] ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ.
[11] ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ.
[12] ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ.
[13] ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ.
[14] ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.
[15] ನಾನು ಈ ಪ್ರಕಾರ ಬಾಯಿಬಿಡುವುದಕ್ಕೆ ಮನಸ್ಸು ಮಾಡಿಕೊಂಡಿದ್ದರೆ, ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು.
[16] ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.
[17] ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು.
[18] ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, ಬೀಳಿಸಿ, ನಾಶಮಾಡಿಬಿಡುತ್ತೀ.
[19] ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರ ರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ.
[20] ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.
[21] ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು.
[22] ನಾನು ವಿವೇಕಹೀನ ತಿಳಿವಳಿಕೆ ಇಲ್ಲದವನಂತೆ, ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು.
[23] ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು,
[24] ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.
[25] ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.
[26] ತನುಮನಗಳು ಕ್ಷಯಿಸಿದರೂ ನನ್ನ ಆತ್ಮಕ್ಕೆ ಬಲವು ನನ್ನ ಶಾಶ್ವತವಾದ ಪಾಲೂ ದೇವರೇ.
[27] ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು; ನಿನಗೆ ದ್ರೋಹ ಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ.
[28] ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.