[1] ನನ್ನ ಶರಣನಾದ ಯೆಹೋವನಿಗೆ ಕೊಂಡಾಟವಾಗಲಿ. ಆತನು ನನ್ನ ಕೈಗಳಿಗೆ ಯುದ್ಧವಿದ್ಯೆಯನ್ನು, ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ.
[2] ನನ್ನ ಪ್ರೀತಿಯು, ನನ್ನ ಕೋಟೆಯು, ನನ್ನ ದುರ್ಗವು, ನನ್ನ ರಕ್ಷಕನು, ನನ್ನ ಗುರಾಣಿಯು, ಆಶ್ರಯವು, ಜನಾಂಗಗಳನ್ನು ನನಗೆ ಅಧೀನಮಾಡಿದವನೂ ಆತನೇ.
[3] ಯೆಹೋವನೇ, ಮನುಷ್ಯನು ಎಷ್ಟು ಮಾತ್ರದವನು? ಅವನನ್ನು ನೀನು ಏಕೆ ನೆನಸಬೇಕು? ಮಾನವನು ಎಷ್ಟರವನು? ಅವನಲ್ಲಿ ಏಕೆ ಲಕ್ಷ್ಯವಿಡಬೇಕು?
[4] ಮನುಷ್ಯನು ಬರೀ ಉಸಿರೇ, ಅವನ ಜೀವಕಾಲವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.
[5] ಯೆಹೋವನೇ, ಆಕಾಶವನ್ನು ತಗ್ಗಿಸಿ ಇಳಿದು ಬಾ, ಪರ್ವತಗಳನ್ನು ಮುಟ್ಟು, ಆಗ ಅವು ಹೊಗೆಹಾಯುವವು.
[6] ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು, ನಿನ್ನ ಬಾಣಗಳಿಂದ ಅವರನ್ನು ಭ್ರಾಂತಿಗೊಳಿಸು.
[7] ಮೇಲಣ ಲೋಕದಿಂದ ಕೈಚಾಚಿ, ಮಹಾ ಜಲರಾಶಿಯೊಳಗಿಂದ ನನ್ನನ್ನು ಎಳೆದುಕೋ.
[8] ಕಪಟವಚನದವರೂ, ಬಲಗೈಯೆತ್ತಿ ಸುಳ್ಳಾಣೆಯಿಡುವವರೂ ಆಗಿರುವ ಅನ್ಯಜನಗಳ ಕೈಯಿಂದ ನನ್ನನ್ನು ಬಿಡಿಸು.
[9] ದೇವರೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು, ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.
[10] ಅರಸುಗಳಿಗೆ ಜಯಪ್ರದನೂ, ಸೇವಕನಾದ ದಾವೀದನನ್ನು ಹಾನಿಕರವಾದ ಕತ್ತಿಗೆ ತಪ್ಪಿಸಿದವನೂ ನೀನೇ.
[11] ಕಪಟವಚನದವರೂ, ಬಲಗೈಯೆತ್ತಿ ಸುಳ್ಳಾಣೆ ಇಡುವವರೂ ಆಗಿರುವ ಅನ್ಯಜನಗಳ ಕೈಯಿಂದ ನನ್ನನ್ನು ಬಿಡಿಸಿ ಕಾಪಾಡು.
[12] ಯೌವನಸ್ಥರಾದ ನಮ್ಮ ಗಂಡುಮಕ್ಕಳು ಸಮೃದ್ಧಿಯಾಗಿ ಬೆಳದಿರುವ ಸಸಿಗಳಂತಿರುವರು, ಹೆಣ್ಣುಮಕ್ಕಳು ಅರಮನೆಯಲ್ಲಿ ಕೆತ್ತಿದ ಮೂಲೆಗಂಬದಂತೆ ಇರುವರು.
[13] ನಮ್ಮ ಕಣಜಗಳು ಸಕಲವಿಧವಾದ ಧಾನ್ಯಗಳಿಂದ ತುಂಬಿರುವವು, ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುವವು.
[14] ನಮ್ಮ ಪಶುಗಳು ಅಸಂಖ್ಯಾತವಾಗಲಿ, ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಒಯ್ಯುವುದಾಗಲಿ ಇರುವುದಿಲ್ಲ, ಬೀದಿಗಳಲ್ಲಿ ಗೋಳಾಟವು ಕೇಳಿಸುವುದಿಲ್ಲ.
[15] ಇಂಥ ಸುಸ್ಥಿತಿಯಲ್ಲಿರುವ ಜನರು ಧನ್ಯರು, ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು.