Skip to content
Opens in a new window
Listen to this chapter • 1:50

[1] ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ.

[2] ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ.

[3] ಜನಾಂಗಗಳಲ್ಲಿ ಆತನ ಘನತೆಯನ್ನೂ, ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ.

[4] ಯೆಹೋವನು ದೊಡ್ಡವನೂ, ಬಹು ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವರುಗಳಲ್ಲಿ ಆತನೇ ಮಹಾದೇವರು.

[5] ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು.

[6] ಆತನ ಸಾನ್ನಿಧ್ಯದಲ್ಲಿ ಘನತೆ ಮತ್ತು ಮಹಿಮೆಗಳೂ, ಆತನ ಪವಿತ್ರಾಲಯದಲ್ಲಿ ಬಲ ಮತ್ತು ಸೌಂದರ್ಯಗಳೂ ಇರುತ್ತವೆ.

[7] ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ, ಯೆಹೋವನವೇ, ಎಂದು ಹೇಳಿ ಆತನನ್ನು ಘನಪಡಿಸಿರಿ.

[8] ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ; ಕಾಣಿಕೆಯೊಡನೆ ಆತನ ಅಂಗಳಗಳಿಗೆ ಬನ್ನಿರಿ.

[9] ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ; ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಭಯಭಕ್ತಿಯಿಂದಿರಿ.

[10] ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ; ಸರ್ವರಿಗೂ ನ್ಯಾಯಾನುಸಾರವಾಗಿ ತೀರ್ಪುಕೊಡುವನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.

[11] ಯೆಹೋವನ ಮುಂದೆ ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.

[12] ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ವನದ ಎಲ್ಲಾ ಮರಗಳು ಉತ್ಸಾಹಧ್ವನಿ ಮಾಡಲಿ.

[13] ಆತನು ಬರುತ್ತಾನೆ; ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ. ಆತನು ಲೋಕಕ್ಕೆ ನೀತಿಗನುಸಾರವಾಗಿಯೂ, ಜನಾಂಗಗಳಿಗೆ ಸತ್ಯತೆಯಿಂದಲೂ ನ್ಯಾಯತೀರಿಸುವನು.

ಕೀರ್ತನೆಗಳು — Chapters