Skip to content
Opens in a new window
Listen to this chapter • 1:59

[1] ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.

[2] ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು; ಯೆಹೋವನು ಅವನನ್ನು ಶತ್ರುಗಳ ಅಧೀನಕ್ಕೆ ಕೊಡುವುದಿಲ್ಲ!

[3] ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ, ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ, ಆರೋಗ್ಯವನ್ನು ಅನುಗ್ರಹಿಸಿದ್ದಿಯಲ್ಲಾ ಸ್ವಾಮೀ.

[4] ನಾನಂತೂ, “ಯೆಹೋವನೇ, ನಿನ್ನ ಆಜ್ಞೆಯನ್ನು ಮೀರಿ ಪಾಪಮಾಡಿದ್ದೇನೆ; ನನ್ನನ್ನು ಕರುಣಿಸಿ ಸ್ವಸ್ಥಮಾಡು” ಅಂದೆನು.

[5] ನನ್ನ ಹಾನಿಯನ್ನು ಅಪೇಕ್ಷಿಸುವ ಶತ್ರುಗಳು, “ಅವನು ಯಾವಾಗ ಸತ್ತಾನು? ಅವನ ಹೆಸರು ಯಾವಾಗ ಇಲ್ಲದೆ ಹೋದೀತು?” ಎಂದು ಹೇಳಿಕೊಳ್ಳುತ್ತಾರೆ.

[6] ಅವರಲ್ಲೊಬ್ಬನು ನನ್ನನ್ನು ನೋಡುವುದಕ್ಕೆ ಬಂದರೆ ಕಪಟದ ಮಾತನಾಡುವನು; ಮನಸ್ಸಿನಲ್ಲಿ ಕುಯುಕ್ತಿಗಳನ್ನು ಕಲ್ಪಿಸಿಕೊಂಡು ಹೋಗಿ ಹೊರಗೆ ಪ್ರಕಟಿಸುತ್ತಾನೆ.

[7] ನನ್ನ ಹಗೆಯವರೆಲ್ಲರು ನನಗೆ ವಿರುದ್ಧವಾಗಿ ಕಿವಿಗಳಲ್ಲಿ ಗುಜುಗುಜು ಮಾತನಾಡಿಕೊಳ್ಳುತ್ತಾರೆ; ನನಗೆ ಕೇಡುಮಾಡಲು ಪರಸ್ಪರ ಆಲೋಚಿಸುತ್ತಾರೆ.

[8] “ಅವನನ್ನು ಅಸಾಧ್ಯರೋಗ ಹಿಡಿದಿದೆ; ಅವನು ಹಾಸಿಗೆಯನ್ನು ಬಿಟ್ಟು ತಿರುಗಿ ಏಳುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ.

[9] ನಾನು ಯಾರನ್ನು ನಂಬಿದ್ದೆನೋ, ಯಾರು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನೋ, ಅಂತಹ ಆಪ್ತಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.

[10] ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳುವಂತೆ ಮಾಡು; ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.

[11] ಶತ್ರುಗಳ ಜಯಧ್ವನಿ ಇಲ್ಲದ್ದರಿಂದಲೇ ನಿನ್ನ ಒಲುಮೆ ನನಗುಂಟೆಂದು ತಿಳಿದುಕೊಳ್ಳುವೆನು.

[12] ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿ, ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ.

[13] ಇಸ್ರಾಯೇಲರ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ. ಆಮೆನ್. ಆಮೆನ್.

ಕೀರ್ತನೆಗಳು — Chapters