Skip to content
Opens in a new window
Listen to this chapter • 3:58

[1] ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ.

[2] ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ.

[3] ನೀರಿನ ಮೇಲೆ ತೊಳೆಗಳನ್ನು ನಿಲ್ಲಿಸಿ ಉಪ್ಪರಿಗೆಗಳನ್ನು ಕಟ್ಟಿಕೊಂಡು; ಮೋಡಗಳನ್ನು ವಾಹನವಾಗಿ ಮಾಡಿಕೊಂಡಿರುವೆ; ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ.

[4] ಗಾಳಿಯನ್ನು ನಿನ್ನ ದೂತರನ್ನಾಗಿಯೂ, ಅಗ್ನಿಜ್ವಾಲೆಯನ್ನು ಸೇವಕರನ್ನಾಗಿಯೂ ಮಾಡಿಕೊಳ್ಳುತ್ತೀ.

[5] ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.

[6] ನೀನು ಅದನ್ನು ಆದಿಸಾಗರವೆಂಬ ವಸ್ತ್ರದಿಂದ ಹೊದಿಸಿದ್ದೀ; ನೀರು ಪರ್ವತಗಳನ್ನೂ ಮುಚ್ಚಿಬಿಟ್ಟಿತ್ತು.

[7] ನೀನು ಗದರಿಸಲು ಅದು ಓಡಿಹೋಯಿತು; ನಿನ್ನ ಗರ್ಜನೆಗೆ ಹೆದರಿ ನೀನು ನೇಮಿಸಿದ ಸ್ಥಳಕ್ಕೆ ಹೋಗಲು,

[8] ಪರ್ವತಗಳು ಎದ್ದವು; ತಗ್ಗುಗಳು ಇಳಿದವು.

[9] ಜಲರಾಶಿಗಳು ಬಂದು ಪುನಃ ಭೂಮಿಯನ್ನು ಮುಚ್ಚಿಕೊಳ್ಳದ ಹಾಗೆ, ನೀನು ಮೇರೆಗಳನ್ನು ಗೊತ್ತುಮಾಡಿದಿ.

[10] ಬುಗ್ಗೆಗಳನ್ನು ತಗ್ಗುಗಳಿಗೆ ಬರಮಾಡುತ್ತೀ; ಅವು ಪರ್ವತಗಳ ನಡುವೆ ಹರಿದುಹೋಗುತ್ತವೆ.

[11] ಅವು ಅಡವಿಯ ಮೃಗಗಳಿಗೆ ನೀರುಕೊಡುತ್ತವೆ; ಕಾಡುಕತ್ತೆಗಳು ದಾಹ ತೀರಿಸಿಕೊಳ್ಳುತ್ತವೆ.

[12] ಪಕ್ಷಿಗಳು ಅವುಗಳ ಬಳಿಯ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.

[13] ನೀನು ನಿನ್ನ ಮೇಲಂತಸ್ತುಗಳಿಂದ ಪರ್ವತಗಳಿಗೆ ನೀರು ಕೊಡುತ್ತೀ; ನಿನ್ನ ಕಾರ್ಯಫಲದಿಂದ ಭೂಮಿಯು ತೃಪ್ತಿಹೊಂದುತ್ತದೆ.

[14] ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ. ಅವರು ಭೂವ್ಯವಸಾಯಮಾಡಿ ಆಹಾರವನ್ನು,

[15] ಹೃದಯಾನಂದಕರವಾದ ದ್ರಾಕ್ಷಾರಸವನ್ನು, ಮುಖಕ್ಕೆ ಕಾಂತಿಯನ್ನು ಉಂಟುಮಾಡುವ ಎಣ್ಣೆಯನ್ನು, ಪ್ರಾಣಾಧಾರವಾದ ರೊಟ್ಟಿಯನ್ನು ಸಂಪಾದಿಸಿಕೊಳ್ಳುತ್ತಾರೆ.

[16] ಯೆಹೋವನು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.

[17] ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ; ತುರಾಯಿ ಮರಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.

[18] ಕಾಡಕುರಿಗಳಿಗೆ ಉನ್ನತವಾದ ಪರ್ವತಗಳೂ, ಬೆಟ್ಟದ ಮೊಲಗಳಿಗೆ ಬಂಡೆಗಳೂ ಆಶ್ರಯಸ್ಥಾನಗಳಾಗಿವೆ.

[19] ವಿಶೇಷಕಾಲಗಳ ಸೂಚನೆಗಾಗಿ ಚಂದ್ರನನ್ನು ನಿರ್ಮಿಸಿರುವೆ; ಸೂರ್ಯನು ತನ್ನ ಅಸ್ತಮಾನ ಸಮಯವನ್ನು ಬಲ್ಲನು.

[20] ನೀನು ಕತ್ತಲೆಯನ್ನು ಬರಮಾಡಲು ರಾತ್ರಿಯಾಗುತ್ತದೆ. ಆಗ ಕಾಡಿನ ಮೃಗಗಳೆಲ್ಲಾ ಹೊರಬರುತ್ತವೆ.

[21] ಪ್ರಾಯದ ಸಿಂಹಗಳು ಬೇಟೆಗಾಗಿ ಗರ್ಜಿಸುತ್ತವೆ; ದೇವರಿಂದ ಆಹಾರವನ್ನು ಕೇಳಿಕೊಳ್ಳುತ್ತವೆ.

[22] ಸೂರ್ಯೋದಯವಾಗಲು ಅವು ಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.

[23] ಮನುಷ್ಯನು ತನ್ನ ಕೆಲಸಕ್ಕೆ ಹೊರಟು ಹೋಗುತ್ತಾನೆ; ಸಾಯಂಕಾಲದವರೆಗೆ ದುಡಿಯುತ್ತಾನೆ.

[24] ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.

[25] ಇಗೋ, ಬಹುವಿಶಾಲವಾದ ಸಮುದ್ರವು! ಅದರೊಳಗೆ ಲೆಕ್ಕವಿಲ್ಲದಷ್ಟು ಸಣ್ಣ, ದೊಡ್ಡ ಜೀವಜಂತುಗಳು ಚಲಿಸುತ್ತಿರುತ್ತವೆ.

[26] ಅದರಲ್ಲಿ ಹಡಗುಗಳು ಸಂಚರಿಸುತ್ತವೆ ನೀನು ಉಂಟುಮಾಡಿದ ಲಿವ್ಯಾತಾನವು ಅದರಲ್ಲಿ ಆಡುತ್ತದೆ.

[27] ಇವುಗಳು ಹೊತ್ತುಹೊತ್ತಿಗೆ ಆಹಾರಕ್ಕೋಸ್ಕರ ನಿನ್ನನ್ನೇ ನಿರೀಕ್ಷಿಸುತ್ತವೆ.

[28] ನೀನು ಕೊಡಲು ಅವು ತೆಗೆದುಕೊಳ್ಳುತ್ತವೆ; ನೀನು ಕೈತೆರೆಯಲು ಅವು ಒಳ್ಳೇಯದನ್ನು ಹೊಂದಿ ತೃಪ್ತಿಗೊಳ್ಳುತ್ತವೆ.

[29] ನೀನು ವಿಮುಖನಾಗಲು ತಲ್ಲಣಿಸುತ್ತವೆ; ಅವುಗಳ ಶ್ವಾಸವನ್ನು ತೆಗೆದುಬಿಡಲು ಅವು ಸತ್ತು ತಿರುಗಿ ಮಣ್ಣಿಗೆ ಸೇರುತ್ತವೆ.

[30] ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ. ನೀನು ಭೂಮಿಯನ್ನು ನೂತನಪಡಿಸುತ್ತಿರುತ್ತಿ.

[31] ಯೆಹೋವನ ಮಹಿಮೆಯು ಸದಾಕಾಲವೂ ಇರಲಿ; ಯೆಹೋವನಿಗೆ ಆತನ ಸೃಷ್ಟಿಗಳಿಂದ ಸಂತೋಷವಾಗಲಿ.

[32] ಆತನು ದೃಷ್ಟಿಸಿದ ಮಾತ್ರದಿಂದಲೇ ಭೂಮಿಯು ಕಂಪಿಸುತ್ತದೆ; ಮುಟ್ಟುತ್ತಲೇ ಪರ್ವತಗಳು ಹೊಗೆಹಾಯುತ್ತವೆ.

[33] ನಾನು ಬದುಕಿರುವವರೆಗೂ ಯೆಹೋವನನ್ನು ಕೀರ್ತಿಸುತ್ತಿರುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಭಜಿಸುತ್ತಿರುವೆನು.

[34] ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ; ನಾನಾದರೋ ಯೆಹೋವನಲ್ಲಿ ಆನಂದಿಸುವೆನು.

[35] ಪಾಪಾತ್ಮರು ಭೂಲೋಕದಲ್ಲಿ ಮುಗಿದುಹೋಗಲಿ; ದುಷ್ಟರು ನಿರ್ಮೂಲವಾಗಲಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ಯೆಹೋವನಿಗೆ ಸ್ತೋತ್ರ.

ಕೀರ್ತನೆಗಳು — Chapters