[1] ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ.
[2] ಆತನು ತನ್ನ ಪರಿಶುದ್ಧ ನಿವಾಸದಿಂದ ನಿನಗೆ ಸಹಾಯಮಾಡಲಿ; ಚೀಯೋನಿನಿಂದ ನಿನಗೆ ಆಧಾರ ದಯಪಾಲಿಸಲಿ.
[3] ನೀನು ಸಮರ್ಪಿಸಿದ ನೈವೇದ್ಯಗಳು ಆತನ ನೆನಪಿಗೆ ಬರಲಿ; ನೀನು ಮಾಡಿದ ಸರ್ವಾಂಗಹೋಮಗಳು ಆತನಿಗೆ ಮೆಚ್ಚಿಕೆಯಾಗಲಿ. ಸೆಲಾ
[4] ಆತನು ನಿನ್ನ ಇಷ್ಟಾರ್ಥವನ್ನು ನೆರವೇರಿಸಲಿ; ನಿನ್ನ ಎಲ್ಲಾ ಸಂಕಲ್ಪಗಳನ್ನು ಸಫಲಮಾಡಲಿ.
[5] ನಿನ್ನ ಜಯದಲ್ಲಿ ಉತ್ಸಾಹಧ್ವನಿ ಮಾಡುವೆವು; ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು. ಯೆಹೋವನು ನಿನ್ನ ಎಲ್ಲಾ ವಿಜ್ಞಾಪನೆಗಳನ್ನು ನೆರವೇರಿಸಲಿ.
[6] ಯೆಹೋವನು ತಾನು ಅಭಿಷೇಕಿಸಿದ ಅರಸನಿಗೆ ಜಯವನ್ನು ಅನುಗ್ರಹಿಸುವನೆಂದು ಈಗ ನನಗೆ ಗೊತ್ತಾಯಿತು. ಆತನು ತನ್ನ ಪವಿತ್ರ ಲೋಕದಿಂದ ಅವನ ಪ್ರಾರ್ಥನೆಗೆ ಸದುತ್ತರವನ್ನು ಕೊಡುವನು, ತನ್ನ ಭುಜಬಲದಿಂದ ಅವನಿಗೆ ವಿಜಯವನ್ನು ಉಂಟುಮಾಡುವನು.
[7] ಕೆಲವರು ರಥಬಲದಲ್ಲಿ, ಕೆಲವರು ಅಶ್ವಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ ಹೆಚ್ಚಳಪಡುತ್ತೇವೆ.
[8] ಅವರು ಬಿದ್ದುಹೋಗಿದ್ದಾರೆ; ನಾವಾದರೋ ಎದ್ದು ನಿಂತಿದ್ದೇವೆ.
[9] ಯೆಹೋವನೇ, ನಮ್ಮ ಅರಸನಿಗೆ ಜಯವನ್ನುಂಟುಮಾಡು; ನಾವು ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸು.