Skip to content
Opens in a new window
Listen to this chapter • 1:48

[1] ಯೆಹೋವನಿಗೆ ಸ್ತೋತ್ರ! ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ, ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ.

[2] ಆತನ ಎಲ್ಲಾ ದೂತರೇ, ಆತನನ್ನು ಸ್ತುತಿಸಿರಿ, ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ.

[3] ಸೂರ್ಯ ಮತ್ತು ಚಂದ್ರರೇ, ಆತನನ್ನು ಸ್ತುತಿಸಿರಿ, ಹೊಳೆಯುವ ಎಲ್ಲಾ ನಕ್ಷತ್ರಗಳೇ, ಆತನನ್ನು ಸ್ತುತಿಸಿರಿ.

[4] ಉನ್ನತೋನ್ನತವಾದ ಆಕಾಶವೇ, ಅದರ ಮೇಲಿರುವ ಜಲರಾಶಿಗಳೇ, ಆತನನ್ನು ಸ್ತುತಿಸಿರಿ.

[5] ಅವು ಯೆಹೋವನ ನಾಮವನ್ನು ಸ್ತುತಿಸಲಿ, ಆತನು ಅಪ್ಪಣೆಕೊಡಲು ಅವು ಉಂಟಾದವು.

[6] ಆತನು ಅವುಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ, ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ.

[7] ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. ತಿಮಿಂಗಿಲಗಳು, ಆದಿಸಾಗರಗಳು

[8] ಬೆಂಕಿ, ಕಲ್ಮಳೆ, ಹಿಮ, ಹಬೆ ಇವುಗಳು, ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿಯು,

[9] ಬೆಟ್ಟಗಳು, ಎಲ್ಲಾ ಗುಡ್ಡಗಳು, ಹಣ್ಣಿನ ಮರಗಳು, ಎಲ್ಲಾ ತುರಾಯಿ ಮರಗಳು,

[10] ಎಲ್ಲಾ ಮೃಗ, ಪಶು, ಪಕ್ಷಿ, ಕ್ರಿಮಿಕೀಟಗಳು,

[11] ಭೂರಾಜರು, ಎಲ್ಲಾ ಜನಾಂಗಗಳು, ಪ್ರಭುಗಳು, ಸರ್ವದೇಶಾಧಿಪತಿಗಳು,

[12] ಪ್ರಾಯಸ್ಥರಾದ ಸ್ತ್ರೀಪುರುಷರು, ಮುದುಕರು, ಹುಡುಗರು

[13] ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು, ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಪ್ರಸರಿಸಿದೆ.

[14] ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. ಆದುದರಿಂದ ಆತನ ಎಲ್ಲಾ ಭಕ್ತರು, ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. ಯೆಹೋವನಿಗೆ ಸ್ತೋತ್ರ!

ಕೀರ್ತನೆಗಳು — Chapters