[1] ಸರ್ವಜನಾಂಗದವರೇ, ಚಪ್ಪಾಳೆ ಹೊಡೆಯಿರಿ; ಆರ್ಭಟದಿಂದ ದೇವರಿಗೆ ಜಯಧ್ವನಿ ಮಾಡಿರಿ.
[2] ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ; ಆತನು ಭೂಲೋಕಕ್ಕೆಲ್ಲಾ ಮಹಾರಾಜನು ಆಗಿದ್ದಾನೆ.
[3] ಆತನು ಜನಾಂಗಗಳನ್ನು ನಮಗೆ ಅಧೀನಪಡಿಸಿ, ಜನಾಂಗಗಳನ್ನು ನಮ್ಮ ಕಾಲಕೆಳಗೆ ಹಾಕಿದ್ದಾನೆ.
[4] ಆತನು ಘನತೆಯುಳ್ಳ ಯಾಕೋಬನ ವಂಶದವರಾದ ನಮ್ಮನ್ನು ಪ್ರೀತಿಸಿ, ನಮ್ಮ ಸ್ವತ್ತನ್ನು ಆಯ್ದುಕೊಂಡಿದ್ದಾನೆ. ಸೆಲಾ
[5] ದೇವರು ಜಯಘೋಷದಿಂದ ಏರಿದ್ದಾನೆ; ಯೆಹೋವನು ತುತ್ತೂರಿಯ ಧ್ವನಿಯೊಡನೆ ಆರೋಹಣ ಮಾಡಿದ್ದಾನೆ.
[6] ದೇವರನ್ನು ಸಂಕೀರ್ತಿಸಿರಿ, ಸ್ತುತಿಸಿ ಹಾಡಿರಿ; ನಮ್ಮ ಅರಸನನ್ನು ಕೀರ್ತಿಸಿರಿ, ಕೊಂಡಾಡಿರಿ.
[7] ಏಕೆಂದರೆ, ದೇವರು ಭೂಲೋಕಕ್ಕೆಲ್ಲಾ ರಾಜನು; ಆತನನ್ನು ಜ್ಞಾನಯುಕ್ತರಾಗಿ ಕೀರ್ತಿಸಿರಿ.
[8] ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ; ಆತನು ತನ್ನ ಪರಿಶುದ್ಧ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ.
[9] ಜನಾಂಗಗಳನ್ನು ಆಳುವ ಪ್ರಭುಗಳು ಅಬ್ರಹಾಮನ ದೇವರ ಪ್ರಜೆಗಳೊಂದಿಗೆ ಸೇರಿಕೊಂಡಿದ್ದಾರೆ; ಏಕೆಂದರೆ ಭೂಪರಲೋಕದ ಗುರಾಣಿಗಳು ದೇವರಿಗೆ ಸೇರಿದವುಗಳೇ. ಆತನೇ ಸರ್ವೋನ್ನತನು.