[1] ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು, ಚೀಯೋನನ್ನು ನೆನಪುಮಾಡಿಕೊಂಡು ಅತ್ತೆವು.
[2] ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗುಹಾಕಿದೆವು.
[3] ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ, “ಚೀಯೋನಿನ ಗೀತೆಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ” ಎಂದು ಹೇಳುತ್ತಿದ್ದರು.
[4] ನಾವು ಪರದೇಶದಲ್ಲಿ ಯೆಹೋವನ ಗೀತೆಗಳನ್ನು ಹಾಡುವುದು ಹೇಗೆ?
[5] ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ ನನ್ನ ಬಲಗೈಯು ತನ್ನ ಕೌಶಲ್ಯವನ್ನು ಮರೆತು ಹೋಗಲಿ.
[6] ಯೆರೂಸಲೇಮೇ, ನಾನು ನಿನ್ನನ್ನು ನೆನಪು ಮಾಡಿಕೊಳ್ಳದಿದ್ದರೆ, ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ.
[7] ಯೆಹೋವನೇ, ಎದೋಮ್ಯರ ಹಾನಿಗಾಗಿ, ಯೆರೂಸಲೇಮಿನ ನಾಶನದ ದಿನವನ್ನು ನೆನಪುಮಾಡಿಕೋ. ಅವರು, “ಅದನ್ನು ಹಾಳುಮಾಡಿರಿ, ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಹೇಳಿದರಲ್ಲಾ.
[8] ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ, ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು.
[9] ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ.