[1] ದೇವರೇ, ಸುಮ್ಮನಿರಬೇಡ! ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ.
[2] ನೋಡು, ನಿನ್ನ ಶತ್ರುಗಳು ಘೋಷಿಸುತ್ತಿದ್ದಾರೆ; ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ.
[3] ಅವರು ನಿನ್ನ ಪ್ರಜೆಗಳಿಗೆ ವಿರುದ್ಧವಾಗಿ ಒಳಸಂಚುಮಾಡಿ, ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ,
[4] “ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ, ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆ, ಅವರನ್ನು ಸಂಹರಿಸೋಣ” ಅಂದುಕೊಳ್ಳುತ್ತಾರೆ.
[5] ಎದೋಮ್ಯರ ಮತ್ತು ಇಷ್ಮಾಯೇಲರ ಪಾಳೆಯಗಳವರು, ಮೋವಾಬ್ಯರು, ಹಗ್ರೀಯರು,
[6] ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಫಿಲಿಷ್ಟಿಯರು, ತೂರ್ ಸಂಸ್ಥಾನದವರು,
[7] ಇವರೆಲ್ಲಾ ಏಕಮನಸ್ಸಿನಿಂದ ಕೂಡಿ, ನಿನಗೆ ವಿರುದ್ಧವಾಗಿ ಒಳಸಂಚು ಮಾಡುತ್ತಾರಲ್ಲಾ;
[8] ಅಶ್ಯೂರ್ಯರೂ ಇವರೊಡನೆ ಕೂಡಿಕೊಂಡು, ಲೋಟನ ವಂಶದವರಿಗೆ ಭುಜಬಲವಾಗಿದ್ದಾರೆ. ಸೆಲಾ
[9] ನೀನು ಮಿದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್ ಹಳ್ಳದ ಬಳಿಯಲ್ಲಿ ಸೀಸೆರ್, ಯಾಬೀನ್ ಎಂಬುವವರಿಗೆ ಮಾಡಿದಂತೆ, ಇವರಿಗೂ ಮಾಡು.
[10] ಅವರು ಎಂದೋರಿನಲ್ಲಿ ವಧಿಸಲ್ಪಟ್ಟು, ಹೊಲದ ಗೊಬ್ಬರವಾಗಿ ಹೋದರಲ್ಲಾ.
[11] ಓರೇಬ್ ಮತ್ತು ಜೇಬ್ ಎಂಬವರ ಗತಿಯು, ಇವರ ಶ್ರೀಮಂತರಿಗೂ ಸಂಭವಿಸಲಿ; ಜೇಬಹ ಮತ್ತು ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ.
[12] ಅವರು “ದೇವರು ಅವರಿಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುತ್ತೇವೆ” ಅಂದುಕೊಳ್ಳುತ್ತಾರಲ್ಲಾ.
[13] ನನ್ನ ದೇವರೇ, ಅವರನ್ನು ಸುಂಟರ ಗಾಳಿಯಲ್ಲಿ ಸುತ್ತಾಡುವ ಧೂಳಿನಂತೆಯೂ, ಹಾರಿಹೋಗುವ ಹೊಟ್ಟಿನಂತೆಯೂ ಮಾಡು.
[14] ನೀನು ಕಾಡನ್ನು ಸುಟ್ಟುಬಿಡುವ ಬೆಂಕಿಯಂತೆಯೂ, ಪರ್ವತಗಳನ್ನು ದಹಿಸಿಬಿಡುವ ಜ್ವಾಲೆಯಂತೆಯೂ ಇದ್ದು,
[15] ನಿನ್ನ ಸುಂಟರಗಾಳಿಯಿಂದ ಅವರನ್ನು ಬೆನ್ನಟ್ಟು; ತುಫಾನಿನಿಂದ ಅವರನ್ನು ಕಳವಳಗೊಳಿಸು.
[16] ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು.
[17] ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ.
[18] ಆಗ ಯೆಹೋವನ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.