[1] ನನ್ನ ದೇವರೇ, ರಾಜನೇ, ನಿನ್ನನ್ನು ಘನಪಡಿಸುವೆನು, ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು.
[2] ಪ್ರತಿದಿನವೂ ನಿನ್ನನ್ನು ಕೀರ್ತಿಸುವೆನು, ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.
[3] ಯೆಹೋವನು ಮಹೋನ್ನತನೂ, ಮಹಾಸ್ತುತಿಪಾತ್ರನೂ ಆಗಿದ್ದಾನೆ, ಆತನ ಮಹತ್ತು ಅಪಾರವಾದದ್ದು.
[4] ಜನರು ವಂಶ ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು, ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು.
[5] ಅವರು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನು ಕೊಂಡಾಡುವರು, ನಿನ್ನ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು.
[6] ಮನುಷ್ಯರು ನಿನ್ನ ಭಯಂಕರ ಕೃತ್ಯಗಳಲ್ಲಿ ಕಂಡು ಬಂದ ಪ್ರತಾಪವನ್ನು ಕೊಂಡಾಡುವರು. ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು.
[7] ಜನರು ನಿನ್ನ ಮಹೋಪಕಾರವನ್ನು ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು, ನಿನ್ನ ನೀತಿಯನ್ನು ಹೊಗಳುವರು.
[8] ಯೆಹೋವನು ದಯೆಯು, ಕನಿಕರವು ಉಳ್ಳವನು, ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ.
[9] ಯೆಹೋವನು ಸರ್ವೋಪಕಾರಿಯು, ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.
[10] ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
[11] ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು, ನಿನ್ನ ಪ್ರತಾಪವನ್ನು ವರ್ಣಿಸುವರು.
[12] ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ, ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು.
[13] ನಿನ್ನ ರಾಜ್ಯವು ಶಾಶ್ವತವಾಗಿದೆ, ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವುದು.
[14] ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ, ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.
[15] ಯೆಹೋವನೇ, ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ, ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತಿ.
[16] ನೀನು ಕೈತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಿ.
[17] ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು.
[18] ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.
[19] ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ, ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.
[20] ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ, ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.
[21] ನನ್ನ ಬಾಯಿ ಯೆಹೋವನನ್ನು ಕೀರ್ತಿಸುವುದು, ಎಲ್ಲಾ ಜೀವಿಗಳು ಆತನ ಪರಿಶುದ್ಧ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ.