[1] ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಸಿದ್ಧವಾಗಿದೆ; ಹರಕೆಗಳು ನಿನಗೆ ಸಲ್ಲುತ್ತವೆ.
[2] ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರೂ ನಿನ್ನ ಬಳಿಗೆ ಬರುವರು.
[3] ನನ್ನ ಪಾಪಗಳನ್ನು ನಿವಾರಿಸಲು ನನ್ನಿಂದಾಗುವುದಿಲ್ಲ. ಆದರೆ ನಮ್ಮ ದೋಷಪರಿಹಾರಕನು ನೀನೇ.
[4] ನಿನ್ನ ಅಂಗಳದಲ್ಲಿ ವಾಸಿಸುವವರಾಗಿ, ನಿನ್ನ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕೋಸ್ಕರ, ನೀನು ಯಾರನ್ನು ಆರಿಸಿಕೊಳ್ಳುತ್ತೀಯೋ ಅವರೇ ಧನ್ಯರು. ನೀನು ವಾಸಿಸುವ ಮಹಾಪವಿತ್ರಾಲಯದ ಸೌಭಾಗ್ಯದಿಂದ ನಮಗೆ ಸಂತೃಪ್ತಿಯಾಗಲಿ.
[5] ನಮ್ಮ ರಕ್ಷಕನಾದ ದೇವರೇ, ನೀನು ಭಯಂಕರ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ನೀತಿಗನುಸಾರವಾಗಿ ನಮಗೆ ಸದುತ್ತರವನ್ನು ದಯಪಾಲಿಸುವಿ. ಭೂಮಿಯ ಎಲ್ಲಾ ಕಡೆಯವರ, ಬಹುದೂರ ಸಮುದ್ರದ ಆಚೆಯ ಎಲ್ಲಾ ನಿವಾಸಿಗಳ ನಂಬಿಕೆಗೆ ಆಧಾರನು ನೀನೇ.
[6] ನೀನು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡು, ಬಲದಿಂದ ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದವನು.
[7] ನೀನು ಸಮುದ್ರ ತರಂಗಗಳ ಘೋಷವನ್ನು ತಡೆಯುವವನೂ, ಜನಾಂಗಗಳ ಗೊಂದಲವನ್ನು ಶಾಂತಿಪಡಿಸುವವನೂ ಆಗಿದೀ.
[8] ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರೂ, ನಿನ್ನ ಅದ್ಭುತಕೃತ್ಯಗಳಿಗಾಗಿ ಭಯಪಡುತ್ತಾರೆ; ಪೂರ್ವದಿಂದ ಪಶ್ಚಿಮದವರೆಗೆ ಇರುವವರನ್ನು ಹರ್ಷಗೊಳಿಸುವಿ.
[9] ನೀನು ನಮ್ಮ ದೇಶವನ್ನು ಕಟಾಕ್ಷಿಸಿ, ಅದರ ಮೇಲೆ ಮಳೆಸುರಿಸಿ, ಚೆನ್ನಾಗಿ ಹದಗೊಳಿಸುತ್ತೀ; ದೇವರೇ, ನಿನ್ನ ಕಾಲುವೆಗಳಲ್ಲಿ ನೀರಿಗೆ ಕೊರತೆ ಇಲ್ಲ. ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತಿ.
[10] ನೇಗಿಲಗೆರೆಗಳನ್ನು ತೇವಗೊಳಿಸಿ, ಮಳೆಯಿಂದ ಅದರ ಹೆಂಟೆಗಳನ್ನು ಕರಗಿಸಿ ಸಮಮಾಡುತ್ತಿ; ಅದರ ಬೆಳೆಯನ್ನು ವೃದ್ಧಿಪಡಿಸುತ್ತಿ.
[11] ನಿನ್ನ ಕೃಪೆಯಿಂದ ಸಂವತ್ಸರಕ್ಕೆ ಸುಭಿಕ್ಷ ಕಿರೀಟವನ್ನು ಇಟ್ಟಿದ್ದಿ; ನೀನು ಹಾದುಹೋಗುವ ಮಾರ್ಗದಲ್ಲೆಲ್ಲಾ ಸಮೃದ್ಧಿಕರವಾದ ವೃಷ್ಟಿಯು ಸುರಿಯುವುದು.
[12] ಮೇವುಗಾಡುಗಳು ಹಸಿರಾಗಿ ಕಂಗೊಳಿಸುತ್ತವೆ; ಗುಡ್ಡಗಳು ಹರ್ಷವೆಂಬ ನಡುಕಟ್ಟನ್ನು ಬಿಗಿದುಕೊಂಡಂತಿವೆ.
[13] ಹುಲ್ಲುಗಾವಲುಗಳು ಕುರಿಹಿಂಡುಗಳೆಂಬ ವಸ್ತ್ರವನ್ನು ಹೊದ್ದುಕೊಂಡಿವೆ; ತಗ್ಗುಗಳು ಬೆಳೆಯಿಂದ ಶೋಭಿಸುತ್ತವೆ; ಅವು ಆನಂದಘೋಷಮಾಡಿ ಹಾಡುತ್ತವೋ ಎಂಬಂತಿವೆ.