[1] ದೇವರೇ, ನೀನು ನಮ್ಮನ್ನು ಸಂಪೂರ್ಣವಾಗಿ ತಳ್ಳಿಬಿಟ್ಟಿದ್ದೇಕೆ? ನೀನು ಪಾಲಿಸುವ ಹಿಂಡಿನ ಮೇಲೆ ನಿನ್ನ ಕೋಪಾಗ್ನಿಯ ಹೊಗೆ ಏರುವುದೇಕೆ?
[2] ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು ಬಿಡುಗಡೆ ಮಾಡಿ ಸಂಪಾದಿಸಿಕೊಂಡ ನಿನ್ನ ಸಭಾಮಂಡಲಿಯನ್ನು ಜ್ಞಾಪಿಸಿಕೋ; ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ ಪರ್ವತವನ್ನು ಮರೆಯಬೇಡ.
[3] ಬಹುಕಾಲದಿಂದ ಹಾಳುಬಿದ್ದಿರುವ ಈ ಸ್ಥಾನದ ಕಡೆಗೆ ನೀನು ಹೆಜ್ಜೆ ಹಾಕು. ನೋಡು, ವೈರಿಯು ಪವಿತ್ರಾಲಯದಲ್ಲಿ ಎಲ್ಲವನ್ನು ಕೆಡವಿಬಿಟ್ಟಿದ್ದಾನೆ.
[4] ನಿನ್ನ ದರ್ಶನಾಲಯದ ಮಧ್ಯದಲ್ಲಿ ನಿನ್ನ ವಿರೋಧಿಗಳು ಆರ್ಭಟಿಸುತ್ತಾರೆ; ನಮ್ಮ ಆರಾಧನಾ ಚಿಹ್ನೆಗಳನ್ನು ತೆಗೆದು ತಮ್ಮ ಚಿಹ್ನೆಗಳನ್ನು ಇಟ್ಟಿದ್ದಾರೆ.
[5] ಮರಗಳ ಗುಂಪಿನಲ್ಲಿ ಕೊಡಲಿಗಳನ್ನು ಮೇಲೆತ್ತುವ ಜನರೋ ಎಂಬಂತಿದ್ದಾರೆ.
[6] ನೋಡು, ಅವರು ಈಗ ಕೈಕೊಡಲಿ ಮತ್ತು ಸುತ್ತಿಗೆಗಳಿಂದ, ದೇವಾಲಯದ ಕೆತ್ತನೆಯ ಕೆಲಸವನ್ನೆಲ್ಲಾ ಹೊಡೆದುಹಾಕುತ್ತಿದ್ದಾರೆ.
[7] ಅವರು ನಿನ್ನ ಪವಿತ್ರಾಲಯಕ್ಕೆ ಬೆಂಕಿ ಹಚ್ಚಿ, ನಿನ್ನ ನಾಮಕ್ಕೆ ಪ್ರತಿಷ್ಠಿತವಾದ ಮಂದಿರವನ್ನು ಹೊಲೆಮಾಡಿ, ನೆಲಸಮಗೊಳಿಸಿದ್ದಾರೆ.
[8] “ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ” ಅಂದುಕೊಂಡಿದ್ದಾರೆ; ದೇಶದಲ್ಲಿರುವ ನಿನ್ನ ಎಲ್ಲಾ ಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ.
[9] ನಮ್ಮ ಆರಾಧನಾ ಚಿಹ್ನೆಗಳು ಈಗ ಕಾಣುವುದಿಲ್ಲ. ಮುಂಚೆ ಇದ್ದಂತೆ ನಮಗೆ ಪ್ರವಾದಿಗಳು ಯಾರೂ ಇಲ್ಲ; ಇದು ಎಷ್ಟರವರೆಗೆ ಇರುವುದೆಂದು ಬಲ್ಲವರು ನಮ್ಮಲ್ಲಿ ಯಾರೂ ಇಲ್ಲ.
[10] ದೇವರೇ, ವಿರೋಧಿಗಳು ಇನ್ನೆಲ್ಲಿಯ ತನಕ ನಿಂದಿಸುತ್ತಿರಬೇಕು? ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ?
[11] ಚಾಚಿದ ಬಲಗೈಯನ್ನು ಏಕೆ ಹಿಂದೆಗೆದಿದ್ದೀ? ಅದನ್ನು ಎದೆಯ ಮೇಲಿನಿಂದ ತೆಗೆದು ಅವರನ್ನು ಸಂಹರಿಸಿಬಿಡು.
[12] ದೇವರೇ, ನೀನು ಮೊದಲಿನಿಂದಲೂ ನನ್ನ ಅರಸನೂ, ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡೆಸಿದಾತನೂ ಆಗಿದ್ದೀಯಲ್ಲವೇ?
[13] ಸ್ವಶಕ್ತಿಯಿಂದ ಸಮುದ್ರವನ್ನು ಭೇದಿಸಿದವನು ನೀನು; ಜಲರಾಶಿಯ ಮೇಲೆ ತಿಮಿಂಗಿಲಗಳ ತಲೆಗಳನ್ನು ಜಜ್ಜಿಬಿಟ್ಟವನು ನೀನು.
[14] ಲಿವ್ಯಾತಾನನ ಶಿರಚ್ಛೇದನೆಮಾಡಿ, ಅಡವಿಯ ಮೃಗಸಮುದಾಯಕ್ಕೆ ಆಹಾರ ಕೊಟ್ಟವನು ನೀನು.
[15] ಬುಗ್ಗೆಹಳ್ಳಗಳನ್ನು ಉಕ್ಕಿಸಿದವನು ನೀನು; ಮಹಾನದಿಗಳನ್ನು ಒಣಗಿಸಿಬಿಟ್ಟವನು ನೀನು.
[16] ಹಗಲಿರುಳುಗಳನ್ನು ನೇಮಿಸಿದವನು ನೀನು; ಸೂರ್ಯ ಮತ್ತು ಜ್ಯೋತಿರ್ಮಂಡಲಗಳ ನಿರ್ಮಾಪಕನು ನೀನು.
[17] ಭೂಮಿಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು; ಬೇಸಿಗೆ ಮತ್ತು ಚಳಿಗಾಲಗಳನ್ನು ನೇಮಿಸಿದವನು ನೀನು.
[18] ಯೆಹೋವನೇ, ವೈರಿಗಳು ನಿನ್ನನ್ನು ನಿಂದಿಸಿದ್ದನ್ನು, ದುರ್ಮತಿಗಳು ನಿನ್ನ ನಾಮವನ್ನು ತಿರಸ್ಕರಿಸಿದ್ದನ್ನು ಜ್ಞಾಪಿಸಿಕೋ.
[19] ನಿನ್ನ ಬೆಳವಕ್ಕಿಯ ಜೀವವನ್ನು ಕಾಡುಮೃಗಕ್ಕೆ ಕೊಡಬೇಡ; ನಿನ್ನ ದೀನಮಂಡಲಿಯನ್ನು ಸದಾ ಮರೆಯಬೇಡ.
[20] ನಿನ್ನ ಒಡಂಬಡಿಕೆಯನ್ನು ಲಕ್ಷ್ಯಕ್ಕೆ ತಂದುಕೋ. ದೇಶದ ಅಂಧಕಾರ ಸ್ಥಾನಗಳಲ್ಲಿ ಬಲತ್ಕಾರವು ತುಂಬಿ ವಾಸಿಸುತ್ತದಲ್ಲಾ.
[21] ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; ದುಃಖಿತರೂ, ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ.
[22] ದೇವರೇ, ಎದ್ದು ನಿನ್ನ ನ್ಯಾಯವನ್ನು ನಡೆಸುವವನಾಗು; ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವುದನ್ನು ಜ್ಞಾಪಿಸಿಕೋ.
[23] ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ, ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು.