Skip to content
Opens in a new window
Listen to this chapter • 4:46

[1] ದೇವರೇ, ರಕ್ಷಿಸು; ಜಲವು ನನ್ನ ಕುತ್ತಿಗೆಯವರೆಗೂ ಏರಿಬಂದಿದೆ.

[2] ಆಳವಾದ ಕೆಸರಿನಲ್ಲಿ ಕುಸಿಯುತ್ತಿದ್ದೇನೆ; ನೆಲೆ ಸಿಕ್ಕುತ್ತಿಲ್ಲ. ಜಲರಾಶಿಯೊಳಗೆ ಮುಳುಗುತ್ತಿದ್ದೇನೆ; ಪ್ರವಾಹವು ನನ್ನನ್ನು ಹೊಡೆದುಕೊಂಡು ಹೋಗುತ್ತಿದೆ.

[3] ಮೊರೆಯಿಟ್ಟು ಬೇಸತ್ತು ಹೋಗಿದ್ದೇನೆ; ಗಂಟಲು ಒಣಗಿಹೋಯಿತು. ನನ್ನ ದೇವರನ್ನು ನಿರೀಕ್ಷಿಸುತ್ತಾ ಕಣ್ಣುಗಳು ಕ್ಷೀಣಿಸುತ್ತವೆ.

[4] ನಿಷ್ಕಾರಣ ದ್ವೇಷಿಗಳು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ; ನಿರಾಕಾರಣವಾಗಿ ನನ್ನನ್ನು ಮುಗಿಸಿಬಿಡಬೇಕೆಂದಿರುವ ವೈರಿಗಳು ಬಲಿಷ್ಠರಾಗಿದ್ದಾರೆ. ನಾನು ಅಪಹರಿಸದಿದ್ದರೂ ನನ್ನಿಂದ ದಂಡ ತೆಗೆದುಕೊಂಡರಲ್ಲಾ.

[5] ದೇವರೇ, ನನ್ನ ಮೂರ್ಖತನವು ನಿನಗೆ ಗೊತ್ತು; ನನ್ನ ಅಪರಾಧಗಳು ನಿನಗೆ ಮರೆಯಾಗಿಲ್ಲ.

[6] ಸೇನಾಧೀಶ್ವರನೇ, ಯೆಹೋವನೇ, ನಿನ್ನನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿನ್ನ ದರ್ಶನವನ್ನು ಬಯಸುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.

[7] ನಿನಗೋಸ್ಕರವಾಗಿ ನಿಂದೆಗೆ ಒಳಗಾದೆನಲ್ಲಾ; ನಾಚಿಕೆಯು ನನ್ನ ಮುಖವನ್ನು ಕವಿದಿದೆ.

[8] ನನ್ನ ಅಣ್ಣತಮ್ಮಂದಿರಿಗೆ ಅಪರಿಚಿತನಂತಾದೆನು; ಒಡಹುಟ್ಟಿದವರಿಗೆ ಪರದೇಶಿಯಂತೆ ಇದ್ದೇನೆ.

[9] ನಿನ್ನ ಆಲಯದ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ. ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬಂದಿವೆ.

[10] ನಾನು ದುಃಖದಿಂದ ಅತ್ತು ಉಪವಾಸ ಮಾಡಿ ನನ್ನ ಆತ್ಮವನ್ನು ಕುಗ್ಗಿಸಿಕೊಂಡಿದ್ದೇನೆ, ಪರಿಹಾಸ್ಯಕ್ಕೆ ಕಾರಣವಾಯಿತು.

[11] ನಾನು ಗೋಣಿತಟ್ಟು ಕಟ್ಟಿಕೊಂಡದ್ದು, ಅವರ ಗಾದೆಗೆ ಆಸ್ಪದವಾಯಿತು.

[12] ಊರ ಬಾಗಿಲಲ್ಲಿ ಕುಳಿತುಕೊಳ್ಳುವವರ ಆಡು ಮಾತಿಗೆ ಗುರಿಯಾಗಿದ್ದೇನೆ. ಕುಡುಕರು ನನ್ನ ವಿಷಯವನ್ನು ಹಾಡಿ ಪರಿಹಾಸ್ಯ ಮಾಡುತ್ತಾರೆ.

[13] ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ; ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ, ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು.

[14] ನಾನು ಕೆಸರಿನಲ್ಲಿ ಮುಳುಗಿಹೋಗದಂತೆ ಮೇಲೆತ್ತು; ವೈರಿಗಳ ಕೈಯೊಳಗಿಂದ ಬಿಡಿಸು; ಮಹಾಜಲರಾಶಿಯಿಂದ ಎಳೆದುಕೋ.

[15] ಪ್ರವಾಹವು ನನ್ನನ್ನು ಬಡಕೊಂಡು ಹೋಗದಿರಲಿ; ಅಗಾಧವು ನನ್ನನ್ನು ಒಳಗೆ ಎಳೆದುಕೊಳ್ಳದಿರಲಿ; ಪಾತಾಳವು ನನ್ನನ್ನು ನುಂಗದಿರಲಿ.

[16] ಯೆಹೋವನೇ, ನನ್ನ ಮೊರೆಯನ್ನು ಲಾಲಿಸು; ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ. ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.

[17] ನಿನ್ನ ದಾಸನಿಗೆ ವಿಮುಖನಾಗಬೇಡ, ಇಕ್ಕಟ್ಟಿನಲ್ಲಿದ್ದೇನೆ, ತಡಮಾಡದೆ ಸಹಾಯಮಾಡು.

[18] ಸಮೀಪಿಸಿ ನನ್ನ ಪ್ರಾಣವನ್ನು ವಿಮೋಚಿಸು. ಶತ್ರು ನಿಮಿತ್ತವಾಗಿ ನನ್ನನ್ನು ರಕ್ಷಿಸು.

[19] ನನಗುಂಟಾದ ನಿಂದೆ, ಲಜ್ಜೆ, ಅಪಮಾನ ಇವು ನಿನಗೇ ಗೊತ್ತು; ನನ್ನ ವಿರೋಧಿಗಳು ನಿನಗೆ ಮರೆಯಾಗಿಲ್ಲವಲ್ಲಾ.

[20] ನಿಂದೆಯಿಂದ ನಿರಾಶೆಗೊಂಡು ಕುಂದಿಹೋಗಿದ್ದೇನೆ. ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ.

[21] ನನಗೆ ಉಣ್ಣುವುದಕ್ಕೆ ಕಹಿಯಾದ ವಸ್ತುವನ್ನೂ, ಬಾಯಾರಿದಾಗ, ಹುಳಿ ದ್ರಾಕ್ಷಾರಸವನ್ನೂ ಕೊಟ್ಟರು.

[22] ಅವರ ಸಂಪತ್ತು ಅವರಿಗೆ ಉರುಲಾಗಲಿ; ನಿಶ್ಚಿಂತರಾಗಿರುವಾಗಲೇ ಅದು ಅವರಿಗೆ ಬೋನಾಗಲಿ.

[23] ಅವರ ಕಣ್ಣು ಮೊಬ್ಬಾಗಿ ಕಾಣದೆ ಹೋಗಲಿ; ಅವರ ನಡುವು ಯಾವಾಗಲೂ ನಡಗುತ್ತಿರಲಿ.

[24] ನಿನ್ನ ರೌದ್ರವನ್ನು ಅವರ ಮೇಲೆ ಸುರಿದುಬಿಡು; ನಿನ್ನ ಕೋಪಾಗ್ನಿಯು ಅವರನ್ನು ದಹಿಸಲಿ.

[25] ಅವರ ಪಾಳೆಯವು ಹಾಳುಬೀಳಲಿ; ಅವರ ನಿವಾಸಗಳು ಜನಶೂನ್ಯವಾಗಲಿ.

[26] ನೀನು ಹೊಡೆದವನನ್ನು ಅವರು ಹಿಂಸಿಸುತ್ತಾರೆ; ನೀನು ಗಾಯಮಾಡಿದವರ ನೋವು ಅವರ ಪರಿಹಾಸ್ಯಕ್ಕೆ ಕಾರಣವಾಗಿದೆ.

[27] ಅವರ ಅಪರಾಧಗಳು ಒಂದೊಂದಾಗಿ ಹೆಚ್ಚುತ್ತಾ ಬರಲಿ. ನಿನ್ನ ನೀತಿಯಲ್ಲಿ ಅವರಿಗೆ ಪಾಲುಕೊಡಬೇಡ.

[28] ಜೀವಿತರ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕು, ಸದ್ಭಕ್ತರ ಹೆಸರಿನ ಸಂಗಡ ಅವರ ಹೆಸರು ಬರೆಯಲ್ಪಡದಿರಲಿ.

[29] ದೇವರೇ, ನೊಂದು ಕುಗ್ಗಿದವನಾದ ನನ್ನನ್ನಾದರೋ, ನಿನ್ನ ರಕ್ಷಣೆಯು ಭದ್ರಸ್ಥಳದಲ್ಲಿರಿಸುವುದು.

[30] ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು.

[31] ಇದು ಯೆಹೋವನಿಗೆ ಕೊಂಬುಗೊರಸುಗಳುಳ್ಳ, ಎಳೇ ಹೋರಿಗಳ ಯಜ್ಞಕ್ಕಿಂತ ಬಹು ಪ್ರಿಯವಾದದ್ದು.

[32] ದೀನರು ಇದನ್ನು ನೋಡಿ ಹರ್ಷಿಸುವರು. ದೇವದರ್ಶನವನ್ನು ಅಪೇಕ್ಷಿಸುವವರೇ, ನಿಮ್ಮ ಆತ್ಮವು ಉಜ್ಜೀವಿಸಲಿ.

[33] ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವುದಿಲ್ಲ.

[34] ಭೂಮ್ಯಾಕಾಶಗಳೂ, ಸಮುದ್ರಗಳೂ, ಜಲಚರಗಳೂ ಆತನನ್ನು ಕೊಂಡಾಡಲಿ.

[35] ದೇವರು ಚೀಯೋನ್ ಪಟ್ಟಣವನ್ನು ರಕ್ಷಿಸಿ, ಯೆಹೂದ ದೇಶದ ನಗರಗಳನ್ನು ಕಟ್ಟಿಸುವನು; ಆತನ ಪ್ರಜೆಗಳು ಅಲ್ಲಿ ವಾಸಮಾಡುತ್ತಾ ಅದನ್ನು ಸ್ವದೇಶವನ್ನಾಗಿ ಮಾಡಿಕೊಳ್ಳುವರು.

[36] ಅವರ ಸಂತತಿಗೇ ಅದರ ಹಕ್ಕಿರುವುದು; ಆತನ ನಾಮವನ್ನು ಪ್ರೀತಿಸುವವರು ಅದರಲ್ಲಿ ವಾಸಿಸುವರು.

ಕೀರ್ತನೆಗಳು — Chapters