Skip to content
Opens in a new window
Listen to this chapter • 1:55

[1] ಅತ್ಯುನ್ನತನಾದ ದೇವರ ಮೊರೆಹೊಕ್ಕವನು, ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.

[2] ನಾನು ಯೆಹೋವನಿಗೆ, “ನೀನೇ ನನ್ನ ಶರಣನು, ನನ್ನ ದುರ್ಗವು, ನಾನು ಭರವಸವಿಟ್ಟಿರುವ ನನ್ನ ದೇವರು” ಎಂದು ಹೇಳುವೆನು.

[3] ನನ್ನನ್ನು ಬೇಟೆಗಾರನ ಬಲೆಯಿಂದಲೂ, ಮರಣಕರ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ.

[4] ಆತನು ನನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆ. ಆತನ ಸತ್ಯತೆಯೇ ನನಗೆ ಖೇಡ್ಯವೂ, ಗುರಾಣಿಯೂ ಆಗಿದೆ.

[5] ರಾತ್ರಿಯಲ್ಲಿ ಭಯಹುಟ್ಟಿಸುವ ಯಾವುದಕ್ಕೂ, ಹಗಲಲ್ಲಿ ಹಾರಿಬರುವ ಬಾಣಕ್ಕೂ,

[6] ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ, ಹಾನಿಕರವಾದ ಮಧ್ಯಾಹ್ನದ ಕೇಡಿಗೂ ಭಯಪಡಬೇಕಾಗಿಲ್ಲ.

[7] ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರು ಸತ್ತು ಬಿದ್ದರೂ ನಿನಗೇನೂ ತಟ್ಟದು.

[8] ನೀನು ಅದನ್ನು ಕಣ್ಣಾರೆ ಕಂಡು, ದುಷ್ಟರಿಗೆ ಪ್ರತಿದಂಡನೆಯುಂಟು ಎಂಬುದಕ್ಕೆ ಸಾಕ್ಷಿಯಾಗಿರುವಿಯಷ್ಟೆ.

[9] ಯೆಹೋವನೇ ನನ್ನ ಶರಣನು! ಅತ್ಯುನ್ನತನಾದ ದೇವರನ್ನು ನಿವಾಸಸ್ಥಾನ ಮಾಡಿಕೊಂಡಿದ್ದಿಯಲ್ಲಾ.

[10] ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು.

[11] ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವುದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು.

[12] ನಿನ್ನ ಕಾಲು ಕಲ್ಲಿಗೆ ತಗಲದಂತೆ, ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.

[13] ಸಿಂಹ ಮತ್ತು ಸರ್ಪಗಳ ಮೇಲೆ ನಡೆಯುವಿ; ಪ್ರಾಯದ ಸಿಂಹವನ್ನೂ, ಘಟಸರ್ಪವನ್ನೂ ತುಳಿದುಬಿಡುವಿ.

[14] ಅವನು ನನ್ನಲ್ಲಿ ಆಸಕ್ತನಾಗಿರುವುದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವುದರಿಂದ ಅವನನ್ನು ಉದ್ಧರಿಸುವೆನು.

[15] ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು;

[16] ದೀರ್ಘಾಯುಷ್ಯವನ್ನು ಅನುಗ್ರಹಿಸಿ, ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.

ಕೀರ್ತನೆಗಳು — Chapters