[1] ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ, ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು.
[2] ಯೆಹೋವನೇ, ನನ್ನ ದೇವರೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.
[3] ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ; ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ.
[4] ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.
[5] ಆತನ ಕೋಪವು ಕ್ಷಣಮಾತ್ರವೇ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ, ಮುಂಜಾನೆ ಹರ್ಷಧ್ವನಿಯು ಕೇಳಿಸುವುದು.
[6] ನಾನಂತೂ ಸುಖದಿಂದಿದ್ದಾಗ, “ನಾನು ಎಂದಿಗೂ ಕದಲುವುದಿಲ್ಲ” ಎಂದು ಹೇಳಿಕೊಂಡಿದ್ದೆನು.
[7] ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ. ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು.
[8] ಯೆಹೋವನೇ, ನಿನಗೆ ಮೊರೆಯಿಟ್ಟೆನು; ನನ್ನ ಒಡೆಯನಿಗೆ ಬಿನ್ನವಿಸಿ,
[9] “ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು? ಮಣ್ಣು ನಿನ್ನನ್ನು ಸ್ತುತಿಸುವುದೋ? ಅದು ನಿನ್ನ ನಂಬಿಕೆಯನ್ನು ಹೊಗಳುವುದೇನು?
[10] ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು.
[11] ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು, ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ.
[12] ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು; ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.