[1] ಯೆಹೋವನೇ, ನಿನ್ನ ಪರಾಕ್ರಮದಲ್ಲಿ ಅರಸನು ಸಂತೋಷಿಸುತ್ತಾನೆ; ನೀನು ಉಂಟುಮಾಡಿದ ಜಯಕ್ಕಾಗಿ ಎಷ್ಟೋ ಆನಂದಪಡುತ್ತಾನೆ.
[2] ನೀನು ಅವನ ಪ್ರಾರ್ಥನೆಯನ್ನು ನಿರಾಕರಿಸದೆ, ಅವನ ಇಷ್ಟಾರ್ಥವನ್ನು ನೆರವೇರಿಸಿದಿಯಲ್ಲಾ. ಸೆಲಾ
[3] ನಾನಾ ಶುಭಗಳೊಡನೆ ನೀನೇ ಅವನನ್ನು ಎದುರುಗೊಂಡಿಯಲ್ಲಾ; ಅವನ ತಲೆಯ ಮೇಲೆ ಸುವರ್ಣ ಕಿರೀಟವನ್ನು ಇಟ್ಟಿದ್ದೀ.
[4] ಅವನು ದೀರ್ಘಾಯುಷ್ಯವನ್ನು ಬೇಡಿಕೊಳ್ಳಲು, ನೀನು ಅವನಿಗೆ ಯುಗಯುಗಾಂತರಗಳ ಆಯುಷ್ಯವನ್ನು ಅನುಗ್ರಹಿಸಿದ್ದೀ.
[5] ನಿನ್ನ ರಕ್ಷಣಕಾರ್ಯದಿಂದ ಅವನ ಗೌರವ ಬಹು ವೃದ್ಧಿಯಾಯಿತು; ಘನತೆ ಮತ್ತು ವೈಭವಗಳನ್ನು ಅವನಿಗೆ ಅನುಗ್ರಹಿಸಿದ್ದೀ.
[6] ಅವನಿಗೆ ಶಾಶ್ವತವಾದ ಸೌಭಾಗ್ಯನಿಧಿಯನ್ನು ದಯಪಾಲಿಸಿದ್ದೀ; ಅವನನ್ನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡಿಸಿದ್ದೀ.
[7] ಅರಸನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ; ಪರಾತ್ಪರನಾದ ದೇವರ ಶಾಶ್ವತ ಪ್ರೀತಿಯ ನಿಮಿತ್ತ ಅವನು ಕದಲುವುದೇ ಇಲ್ಲ.
[8] ಶತ್ರುಗಳೆಲ್ಲರು ನಿನಗೆ ಸಿಕ್ಕುವರು; ಭುಜಬಲದಿಂದ ನಿನ್ನ ಹಗೆಗಳನ್ನು ಹಿಡಿಯುವಿ.
[9] ನೀನು ಪ್ರತ್ಯಕ್ಷನಾಗುವಾಗ ಉರಿಯುವ ಕುಲುಮೆಯಂತಿದ್ದು ಅವರನ್ನು ಬೂದಿ ಮಾಡುವಿ. ಯೆಹೋವನು ಮಹಾಕೋಪದಿಂದ ಅವರನ್ನು ನಾಶ ಮಾಡುವನು; ಆತನ ಕೋಪಾಗ್ನಿ ಅವರನ್ನು ದಹಿಸಿಬಿಡುವುದು.
[10] ನೀನು ಅವರನ್ನು ಸಂಹರಿಸಿ, ಭೂಮಿಯ ಮೇಲೆ ಅವರ ಸಂತತಿಯೇ ಇಲ್ಲದಂತೆ ಮಾಡುವಿ; ಅವರ ವಂಶದವರು ಮನುಷ್ಯರೊಳಗೆ ಉಳಿಯುವುದೇ ಇಲ್ಲ.
[11] ಅವರು ತಂತ್ರೋಪಾಯಗಳನ್ನು ಕಲ್ಪಿಸಿ, ನಿನಗೆ ಕೇಡನ್ನು ಮಾಡಬೇಕೆಂದು ಆಲೋಚಿಸಿದರೂ ಅದು ನಡೆಯುವುದಿಲ್ಲ.
[12] ನೀನು ನಿನ್ನ ಬಾಣಗಳನ್ನು ಬಿಲ್ಲಿಗೆ ಹೂಡಿ, ಅವರ ಮುಖಗಳ ಮೇಲೆ ಎಸೆದು, ಅವರು ಬೆನ್ನುತೋರಿಸಿ ಓಡಿಹೋಗುವಂತೆ ಮಾಡುವಿ.
[13] ಯೆಹೋವನೇ, ಪರಾಕ್ರಮದಿಂದ ನಿನ್ನನ್ನು ಘನಪಡಿಸಿಕೋ; ನಾವು ಗಾಯನಮಾಡುತ್ತಾ ನಿನ್ನ ಶೂರತ್ವವನ್ನು ಕೊಂಡಾಡುವೆವು.