Skip to content
Opens in a new window
Listen to this chapter • 1:35

[1] ದೇವರೇ, ಕೊಂಡಾಡುತ್ತೇವೆ; ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮ ಮಹತ್ವವನ್ನು ನೆನಪುಮಾಡಿಕೊಂಡು; ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತೇವೆ.

[2] ದೇವರು ನುಡಿದದ್ದು, “ನಿಯಮಿತ ಕಾಲವು ಬಂದಾಗ, ನಾನೇ ನೀತಿಯಿಂದ ತೀರ್ಪುಕೊಡುವೆನು.

[3] ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ, ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ” ಎಂಬುದು. ಸೆಲಾ

[4] ನಾನು ಹೆಮ್ಮೆಗಾರರಿಗೆ, “ಕೊಚ್ಚಿಕೊಳ್ಳಬೇಡಿರಿ” ಎಂದು; ದುಷ್ಟರಿಗೆ, “ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ;

[5] ಕೊಂಬುಗಳನ್ನು ಮೇಲೆತ್ತಬೇಡಿರಿ; ಸೊಕ್ಕಿನಿಂದ ಮಾತನಾಡಬೇಡಿರಿ” ಎಂದು ಹೇಳುವೆನು.

[6] ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ, ಅರಣ್ಯದಿಂದಾಗಲಿ ಬರುವುದಿಲ್ಲ.

[7] ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು, ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ.

[8] ಯೆಹೋವನ ಕೈಯಲ್ಲಿ ಪಾತ್ರೆ ಇದೆ; ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ. ಅದರಿಂದ ಹೊಯ್ದು ಹಂಚುತ್ತಾನೆ. ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.

[9] ನಾನಾದರೋ ಸದಾ ವರ್ಣಿಸುವವನಾಗಿ, ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುತ್ತಾ ವರ್ಣಿಸಿ ಹಾಡುವೆನು.

[10] ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳನ್ನು ಉನ್ನತಮಟ್ಟಕ್ಕೆ ಎತ್ತಲ್ಪಡುವವು.

ಕೀರ್ತನೆಗಳು — Chapters