[1] ಯೆಹೋವನೇ, ಮುಯ್ಯಿತೀರಿಸುವ ದೇವರೇ, ಮುಯ್ಯಿತೀರಿಸುವ ದೇವರೇ, ಕೋಪವನ್ನು ತೋರ್ಪಡಿಸು.
[2] ಲೋಕದ ನ್ಯಾಯಾಧಿಪತಿಯೇ, ಏಳು; ಗರ್ವಿಷ್ಠರಿಗೆ ತಕ್ಕ ಶಿಕ್ಷೆಯನ್ನು ಕೊಡು.
[3] ಯೆಹೋವನೇ, ದುಷ್ಟರು ಎಲ್ಲಿಯವರೆಗೆ, ದುಷ್ಟರು ಎಲ್ಲಿಯವರೆಗೆ ಹಿಗ್ಗುತ್ತಿರಬೇಕು?
[4] ಕೆಡುಕರೆಲ್ಲರು ಉಬ್ಬಿಕೊಂಡು, ಅಹಂಕಾರವನ್ನು ಕಕ್ಕುತ್ತಾರೆ.
[5] ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ; ನಿನ್ನ ಸ್ವತ್ತನ್ನು ಕುಗ್ಗಿಸಿಬಿಡುತ್ತಾರೆ;
[6] ವಿಧವೆಯರನ್ನೂ, ಪರದೇಶಿಯನ್ನೂ ಕೊಲ್ಲುತ್ತಾರೆ; ಅನಾಥರನ್ನು ಹತಮಾಡುತ್ತಾರೆ.
[7] ಅವರು, “ಯಾಹುವು ನೋಡುವುದೇ ಇಲ್ಲ; ಯಾಕೋಬ್ಯರ ದೇವರು ಲಕ್ಷಿಸುವುದೇ ಇಲ್ಲ” ಅನ್ನುತ್ತಾರೆ.
[8] ಪಶುಪ್ರಾಯರಾದ ಪ್ರಜೆಗಳಿರಾ, ಲಕ್ಷಿಸಿರಿ; ಮೂರ್ಖರೇ, ನಿಮಗೆ ಬುದ್ಧಿಬರುವುದು ಯಾವಾಗ?
[9] ಕಿವಿಮಾಡಿದವನು ಕೇಳನೋ? ಕಣ್ಣುಕೊಟ್ಟವನು ನೋಡನೋ?
[10] ಜನಾಂಗಗಳನ್ನು ಶಿಕ್ಷಿಸುವವನೂ, ಮನುಷ್ಯರಿಗೆ ಬುದ್ಧಿಕಲಿಸುವವನೂ ಗದರಿಸನೋ?
[11] ಮನುಷ್ಯನ ಯೋಚನೆಗಳು, “ಉಸಿರೇ” ಎಂದು ಯೆಹೋವನು ತಿಳುಕೊಳ್ಳುತ್ತಾನೆ.
[12] ಯಾಹುವೇ, ನೀನು ಯಾರನ್ನು ಶಿಕ್ಷಿಸಿ, ಧರ್ಮೋಪದೇಶಮಾಡುತ್ತೀಯೋ ಅವನೇ ಧನ್ಯನು.
[13] ಅಂಥವನನ್ನು, ದುಷ್ಟನಿಗೋಸ್ಕರ ಗುಂಡಿಯು ಅಗೆಯಲ್ಪಡುವ ತನಕ, ಆಪತ್ತಿನಲ್ಲಿಯೂ ನೀನು ಸಂರಕ್ಷಿಸುತ್ತಿ.
[14] ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ; ತನ್ನ ಸ್ವತ್ತನ್ನು ಕೈಬಿಡುವುದಿಲ್ಲ.
[15] ನ್ಯಾಯತೀರ್ಪು ನೀತಿಗೆ ತಿರುಗಿಕೊಳ್ಳುವುದು; ಯಥಾರ್ಥಚಿತ್ತರೆಲ್ಲರೂ ಅದನ್ನೇ ಅನುಸರಿಸುವರು.
[16] ದುಷ್ಟರಿಗೆ ವಿರುದ್ಧವಾಗಿ ನನಗೋಸ್ಕರ ಏಳುವವರು ಯಾರು? ಕೆಡುಕರಿಗೆ ವಿರುದ್ಧವಾಗಿ ನನಗೋಸ್ಕರ ಎದ್ದು ನಿಲ್ಲುವವರು ಯಾರು?
[17] ಯೆಹೋವನ ಸಹಾಯವಿಲ್ಲದಿದ್ದರೆ ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
[18] ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದುಕೊಂಡಾಗಲೇ, ನಿನ್ನ ಕೃಪೆಯು ನನಗೆ ಆಧಾರವಾಯಿತು.
[19] ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ, ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.
[20] ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ, ನಿನಗೂ ಸಂಬಂಧವೇನು?
[21] ಜೀವವನ್ನು ತೆಗೆಯಬೇಕೆಂದು ನೀತಿವಂತರ ಮೇಲೆ ಬೀಳುತ್ತಾರೆ; ನಿರಪರಾಧಿಗಳಿಗೆ ಮರಣಶಿಕ್ಷೆ ವಿಧಿಸುತ್ತಾರೆ.
[22] ಆದರೆ ಯೆಹೋವನು ನನ್ನ ದುರ್ಗವೂ, ನನ್ನ ದೇವರು ಆಶ್ರಯಗಿರಿಯೂ ಆಗಿದ್ದಾನೆ.
[23] ಅವರ ಕೆಟ್ಟತನವನ್ನು ಅವರಿಗೇ ತಿರುಗಿಸುವನು; ಅವರ ದುಷ್ಟತನದಿಂದಲೇ ಅವರನ್ನು ನಿರ್ಮೂಲಮಾಡುವನು. ನಮ್ಮ ಯೆಹೋವ ದೇವರು ಅವರನ್ನು ಸಂಹರಿಸಿಬಿಡುವನು.