Skip to content
Opens in a new window
Listen to this chapter • 4:59

[1] ಕೆಟ್ಟ ನಡತೆಯುಳ್ಳವರನ್ನು ನೋಡಿ ತಳಮಳಗೊಳ್ಳಬೇಡ; ದುರಾಚಾರಿಗಳನ್ನು ನೋಡಿ ಅಸೂಯೆಪಡಬೇಡ.

[2] ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಹಸಿರು ಸಸಿಯಂತೆ ಬಾಡಿಹೋಗುವರು.

[3] ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.

[4] ನೀನು ಯೆಹೋವನಲ್ಲಿ ಸಂತೋಷಿಸು; ಆಗ ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.

[5] ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.

[6] ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ, ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.

[7] ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

[8] ಕೋಪವನ್ನು ಅಡಗಿಸಿಕೋ; ರೋಷವನ್ನು ಬಿಡು. ತಳಮಳಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.

[9] ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.

[10] ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ನಿರ್ನಾಮವಾಗಿ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವುದೇ ಇಲ್ಲ.

[11] ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.

[12] ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.

[13] ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ.

[14] ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ; ಯಥಾರ್ಥರನ್ನು ಕೊಂದು ಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ.

[15] ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವುದು; ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು;

[16] ದುಷ್ಟರ ಮಹಾಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.

[17] ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು.

[18] ಯೆಹೋವನು ನಿರ್ದೋಷಿಗಳ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವತ್ತು ಶಾಶ್ವತವಾಗಿ ನಿಲ್ಲುವುದು.

[19] ಅವರಿಗೆ ವಿಪತ್ಕಾಲದಲ್ಲಿಯೂ ಅಪಮಾನವಾಗುವುದಿಲ್ಲ; ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.

[20] ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು.

[21] ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.

[22] ಯೆಹೋವನ ಆಶೀರ್ವಾದವು ಯಾರಿಗಿರುವುದೋ ಅವರು ದೇಶವನ್ನು ಅನುಭವಿಸುವರು; ಆತನ ಶಾಪವು ಯಾರಿಗಿರುವುದೋ ಅವರು ತೆಗೆದುಹಾಕಲ್ಪಡುವರು.

[23] ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.

[24] ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.

[25] ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲಿ, ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ.

[26] ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದ ಹೊಂದುವರು.

[27] ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ ದೇಶದಲ್ಲಿ ವಾಸವಾಗಿರುವಿ.

[28] ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವುದು.

[29] ನೀತಿವಂತರೋ ದೇಶವನ್ನು ಅನುಭವಿಸುವವರಾಗಿ, ಅದರಲ್ಲಿ ಶಾಶ್ವತವಾಗಿ ವಾಸಿಸುವರು.

[30] ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ, ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ.

[31] ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವುದು; ಅವನು ಜಾರುವುದೇ ಇಲ್ಲ.

[32] ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.

[33] ಆದರೆ ಯೆಹೋವನು ಅವನನ್ನು ಅವರ ಕೈಗೆ ಸಿಕ್ಕಗೊಡಿಸುವುದಿಲ್ಲ; ಅವನನ್ನು ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವುದಿಲ್ಲ.

[34] ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವುದನ್ನು ನೀನು ನೋಡುವಿ.

[35] ದುಷ್ಟನು ಭೀಕರನಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿಕೊಂಡಿರುವುದನ್ನು ನೋಡಿದ್ದೆನು.

[36] ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ, ಅವನು ಇಲ್ಲದೆ ಹೋಗಿದ್ದನು, ಅವನನ್ನು ಹುಡುಕಿದರೂ ಸಿಕ್ಕಲಿಲ್ಲ.

[37] ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವುದು.

[38] ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವುದು.

[39] ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ.

[40] ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು; ಅವರು ಆತನ ಆಶ್ರಿತರಾದುದರಿಂದ, ಆತನು ಅವರನ್ನು ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.

ಕೀರ್ತನೆಗಳು — Chapters