[1] ದೇವರೇ, ಕರುಣಿಸು, ನನ್ನನ್ನು ಕರುಣಿಸು. ನೀನೇ ನನ್ನ ಆಶ್ರಯಸ್ಥಾನವಲ್ಲವೇ! ಆಪತ್ತುಗಳು ಕಳೆದುಹೋಗುವ ತನಕ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
[2] ಪರಾತ್ಪರನಾದ ದೇವರಿಗೆ ಮೊರೆಯಿಡುವೆನು, ನನ್ನ ಕಾರ್ಯವನ್ನು ಸಫಲಮಾಡುವ ದೇವರನ್ನು ಕೂಗಿ ಕರೆಯುವೆನು.
[3] ಆತನು ಪರಲೋಕದಿಂದ ಆಲಿಸಿ, ನಿಂದಕರ ಮಾತಿನಿಂದ ನನ್ನನ್ನು ತಪ್ಪಿಸುವನು; ಸೆಲಾ ತನ್ನ ಪ್ರೀತಿಯನ್ನು ಮತ್ತು ಸತ್ಯತೆಯನ್ನೂ ತೋರ್ಪಡಿಸುವನು.
[4] ನಾನು ಸಿಂಹಗಳಂತಿರುವ ಶತ್ರುಗಳ ಮಧ್ಯದಲ್ಲಿ ಸಿಕ್ಕಿದ್ದೇನೆ; ದುರಾಶೆಯಿಂದ ಕಬಳಿಸುವಂತಹ ಮನುಷ್ಯರ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಈಟಿ ಮತ್ತು ಬಾಣಗಳಂತಿವೆ, ನಾಲಿಗೆಗಳು ಹದವಾದ ಕತ್ತಿಗಳೇ.
[5] ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.
[6] ನನ್ನ ಕಾಲಿಗೆ ಬಲೆಯನ್ನು ಹಾಸಿದ್ದಾರೆ; ನನ್ನ ಪ್ರಾಣವು ಕುಂದಿಹೋಯಿತು. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದರು; ತಾವೇ ಅದರಲ್ಲಿ ಬಿದ್ದುಹೋದರು. ಸೆಲಾ
[7] ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ವಾದ್ಯಗಳನ್ನು ನುಡಿಸುತ್ತಾ ಹಾಡುವೆನು.
[8] ನನ್ನ ಮನವೇ, ಚುರುಕಾಗು; ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.
[9] ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.
[10] ಏಕೆಂದರೆ ನಿನ್ನ ಕೃಪೆಯು ಆಕಾಶವನ್ನೂ, ನಿನ್ನ ಸತ್ಯತೆಯು ಮುಗಿಲನ್ನೂ ಮುಟ್ಟುವಷ್ಟು ದೊಡ್ಡವಾಗಿವೆ.
[11] ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.