Skip to content
Opens in a new window
Listen to this chapter • 2:55

[1] ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿದೆ.

[2] ಇಸ್ರಾಯೇಲರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

[3] ಆರೋನನ ಮನೆತನದವರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

[4] ಯೆಹೋವನ ಭಕ್ತರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

[5] ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದ ಸ್ಥಳದಲ್ಲಿ ನೆಲೆಸುವಂತೆ ಮಾಡಿದನು.

[6] ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?

[7] ಯೆಹೋವನು ನನಗೆ ಇದ್ದಾನೆ; ಆತನೇ ನನಗೆ ಸಹಾಯಕನು; ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು.

[8] ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ, ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

[9] ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ, ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

[10] ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು; ಯೆಹೋವನ ಬಲದಿಂದ ಅವರನ್ನು ಸಂಹರಿಸುವೆನು.

[11] ಅವರು ನನ್ನನ್ನು ಸುತ್ತಲೂ ಮುತ್ತಿದರು; ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು.

[12] ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ; ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು. ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.

[13] ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

[14] ನನ್ನ ಬಲವು, ಕೀರ್ತನೆಯು ಯೆಹೋವನೇ; ಆತನಿಂದ ನನಗೆ ರಕ್ಷಣೆಯುಂಟಾಯಿತು.

[15] ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

[16] ಯೆಹೋವನ ಬಲಗೈ ಉನ್ನತವಾಗಿದೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

[17] ನಾನು ಸಾಯುವುದಿಲ್ಲ; ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು.

[18] ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಆದರೆ ಮರಣಕ್ಕೆ ಒಪ್ಪಿಸಲಿಲ್ಲ.

[19] ನೀತಿದ್ವಾರಗಳನ್ನು ತೆರೆಯಿರಿ; ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು.

[20] ಇದು ಯೆಹೋವನ ಮಂದಿರದ್ವಾರವು; ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ.

[21] ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ, ನಿನ್ನನ್ನು ಕೊಂಡಾಡುತ್ತೇನೆ.

[22] ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ, ಮುಖ್ಯವಾದ ಮೂಲೆಗಲ್ಲಾಯಿತು;

[23] ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.

[24] ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.

[25] ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.

[26] ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ; ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ.

[27] ಯೆಹೋವನೇ ದೇವರು; ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ. ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ.

[28] ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ; ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.

[29] ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು.

ಕೀರ್ತನೆಗಳು — Chapters