[1] ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರ ನಾಮವನ್ನು ಕೀರ್ತಿಸಿರಿ.
[2] ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
[3] ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತ ರೋಗಗಳನ್ನು ವಾಸಿಮಾಡುವವನೂ,
[4] ನಿನ್ನ ಜೀವವನ್ನು ನಾಶನದಿಂದ ತಪ್ಪಿಸುವವನೂ, ಶಾಶ್ವತ ಪ್ರೀತಿ ಮತ್ತು ಕರುಣೆಯೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ.
[5] ಶ್ರೇಷ್ಠ ವರಗಳಿಂದ ನಿನ್ನ ಆಶೆಯನ್ನು ಪೂರ್ಣಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ.
[6] ಯೆಹೋವನು ನೀತಿಯನ್ನು ಸಾಧಿಸುವವನಾಗಿ, ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ.
[7] ಆತನು ಮೋಶೆಗೆ ತನ್ನ ಮಾರ್ಗವನ್ನೂ, ಇಸ್ರಾಯೇಲರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.
[8] ಯೆಹೋವನು ಕನಿಕರವೂ, ದಯೆಯೂ, ದೀರ್ಘಶಾಂತಿಯೂ, ಪೂರ್ಣಪ್ರೀತಿಯೂ ಉಳ್ಳವನು.
[9] ಆತನು ಯಾವಾಗಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.
[10] ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.
[11] ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ.
[12] ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.
[13] ತಂದೆಯು ಮಕ್ಕಳನ್ನು ಕನಿಕರಿಸುವಂತೆ, ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.
[14] ನಾವು ರೂಪಗೊಂಡಿದ್ದನ್ನು ಆತನು ಬಲ್ಲನು; ನಾವು ಧೂಳಾಗಿದ್ದೇವೆ ಎಂಬುವುದನ್ನು ನೆನಪುಮಾಡಿಕೊಳ್ಳುತ್ತಾನೆ.
[15] ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ; ಅವನು ಅಡವಿಯ ಹೂವಿನ ಹಾಗೆ ಶೋಭಿಸುತ್ತಾನೆ.
[16] ಗಾಳಿ ಬಡಿಯುತ್ತಲೇ ಅದು ಹೋಗುವುದು; ಅದರ ಸ್ಥಳವು ಅದನ್ನು ತಿರುಗಿ ಕಾಣುವುದಿಲ್ಲ.
[17] ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ, ಆತನ ದಯೆಯು ಯುಗಯುಗಾಂತರಗಳವರೆಗೂ ಇರುತ್ತದೆ.
[18] ಆತನ ನಿಬಂಧನೆಗಳನ್ನು ಕೈಕೊಂಡು, ಆತನ ವಿಧಿಗಳನ್ನು ನೆನಪಿನಲ್ಲಿಟ್ಟುಕೊಂಡು ನಡೆಯುವವರ ಮಕ್ಕಳು ಮೊಮ್ಮಕ್ಕಳವರೆಗೂ ಆತನು ತನ್ನ ನೀತಿಯನ್ನು ಸಾಧಿಸುವನು.
[19] ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.
[20] ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೆ ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ.
[21] ಆತನ ಸೈನ್ಯಗಳೇ, ಆತನ ಚಿತ್ತವನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.
[22] ಆತನ ರಾಜ್ಯದ ಸರ್ವಸ್ಥಳಗಳಲ್ಲಿರುವ ಎಲ್ಲಾ ಸೃಷ್ಟಿಗಳೇ, ಯೆಹೋವನನ್ನು ಕೊಂಡಾಡಿರಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು.