Skip to content
Opens in a new window
Listen to this chapter • 2:39

[1] ಯೆಹೋವನಿಗೆ ಸ್ತೋತ್ರ! ಯೆಹೋವನ ನಾಮವನ್ನು ಸ್ತುತಿಸಿರಿ. ಯೆಹೋವನ ಸೇವಕರೇ,

[2] ಯೆಹೋವನ ಮಂದಿರದಲ್ಲಿಯೂ, ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ, ಆತನನ್ನು ಕೀರ್ತಿಸಿರಿ.

[3] ಯೆಹೋವನಿಗೆ ಸ್ತೋತ್ರ! ಯೆಹೋವನು ಒಳ್ಳೆಯವನು. ಆತನ ನಾಮವನ್ನು ಕೊಂಡಾಡಿರಿ; ಆತನು ಕೃಪಾಪೂರ್ಣನು.

[4] ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ, ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ.

[5] ಯೆಹೋವನು ದೊಡ್ಡವನೆಂದೂ, ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ.

[6] ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.

[7] ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ; ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.

[8] ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ, ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು.

[9] ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ, ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು, ಮಹತ್ಕಾರ್ಯಗಳನ್ನು ನಡೆಸಿದನು.

[10] ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು; ಬಲಿಷ್ಠ ರಾಜರನ್ನು ಕೊಂದುಹಾಕಿದನು.

[11] ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ಇದ್ದರು. ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು.

[12] ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು; ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು.

[13] ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು; ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ.

[14] ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು, ತನ್ನ ಸೇವಕರನ್ನು ಕನಿಕರಿಸುವನು.

[15] ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

[16] ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ, ಕಣ್ಣಿದ್ದರೂ ನೋಡುವುದಿಲ್ಲ,

[17] ಕಿವಿಯಿದ್ದರೂ ಕೇಳುವುದಿಲ್ಲ, ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.

[18] ಅವುಗಳನ್ನು ಮಾಡುವವರು, ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ.

[19] ಇಸ್ರಾಯೇಲನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಆರೋನನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.

[20] ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಯೆಹೋವನ ಭಕ್ತರೇ, ಯೆಹೋವನನ್ನು ಕೊಂಡಾಡಿರಿ.

[21] ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ, ಕೀರ್ತಿ ಉಂಟಾಗಲಿ, ಯೆಹೋವನಿಗೆ ಸ್ತೋತ್ರ!

ಕೀರ್ತನೆಗಳು — Chapters