[1] ಸೇನಾಧೀಶ್ವರನಾದ ಯೆಹೋವನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!
[2] ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು, ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು. ಆದರೆ ಈಗ ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ.
[3] ಆಹಾ, ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಅರಸನೇ, ನಿನ್ನ ಯಜ್ಞವೇದಿಗಳ ಸಮೀಪದಲ್ಲಿಯೇ ಗುಬ್ಬಿಗೆ ಮನೆಯೂ, ಪಾರಿವಾಳಕ್ಕೆ ಮರಿಮಾಡುವ ಗೂಡೂ ದೊರಕಿತಲ್ಲಾ!
[4] ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು. ಅವರು ನಿತ್ಯವೂ ನಿನ್ನನ್ನು ಕೀರ್ತಿಸುತ್ತಾ ಇರುತ್ತಾರೆ. ಸೆಲಾ
[5] ನಿನ್ನಲ್ಲೇ ಬಲವನ್ನು ಹೊಂದುವ ಮನುಷ್ಯರು ಧನ್ಯರು. ಅವರು ಯಾತ್ರಿಕರಾಗಿ,
[6] ಕಣ್ಣೀರಿನ ತಗ್ಗನ್ನು ದಾಟುವಾಗ, ಅಲ್ಲಿ ಒರತೆಗಳನ್ನು ತೋಡಿ ನೀರಿನ ಸ್ಥಳವಾಗ ಮಾಡುತ್ತಾರೆ. ಮುಂಗಾರು ಮಳೆಯು ಅದನ್ನು ಸಮೃದ್ಧಿಗೊಳಿಸುತ್ತದೆ.
[7] ಅವರು ಹೆಚ್ಚು ಹೆಚ್ಚಾಗಿ ಬಲಹೊಂದಿ, ಚೀಯೋನ್ ಗಿರಿಯಲ್ಲಿ ದೇವರ ಸನ್ನಿಧಿಯನ್ನು ಸೇರಿ,
[8] “ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಮೊರೆಯನ್ನು ಕೇಳು; ಯಾಕೋಬ್ಯರ ದೇವರೇ, ಕಿವಿಗೊಡು” ಅನ್ನುತ್ತಾರೆ. ಸೆಲಾ
[9] ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು; ನಿನ್ನ ಅಭಿಷಿಕ್ತನ ಮುಖವನ್ನು ಕಟಾಕ್ಷಿಸು.
[10] ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು, ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಹೊಸ್ತಿಲಲ್ಲಿ ಬಿದ್ದುಕೊಂಡಿರುವುದೇ ಲೇಸು.
[11] ಯೆಹೋವ ದೇವರು ಸೂರ್ಯನೂ, ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ, ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನೋ?
[12] ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.