Skip to content
Opens in a new window
Listen to this chapter • 1:51

[1] ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು, ಬಲಾತ್ಕಾರಿಗಳಿಂದ ತಪ್ಪಿಸಿ ಕಾಪಾಡು.

[2] ಅವರು ಕೇಡು ಕಲ್ಪಿಸುತ್ತಾರೆ, ಯಾವಾಗಲೂ ಜಗಳವೆಬ್ಬಿಸುತ್ತಾರೆ.

[3] ತಮ್ಮ ನಾಲಿಗೆಯನ್ನು ಸರ್ಪದಂತೆ ಹದಮಾಡಿದ್ದಾರೆ, ಅವರ ತುಟಿಗಳ ಹಿಂದೆ ಹಾವಿನ ವಿಷವಿದೆ. ಸೆಲಾ

[4] ಯೆಹೋವನೇ, ದುಷ್ಟರ ಕೈಗೆ ಸಿಕ್ಕದಂತೆ ನನ್ನನ್ನು ಕಾಪಾಡು, ಬಲಾತ್ಕಾರಿಗಳಿಂದ ತಪ್ಪಿಸಿ ರಕ್ಷಿಸು. ಅವರು ನನ್ನ ಕಾಲುಗಳನ್ನು ಎಡವಿಸಿಬಿಡಬೇಕೆಂದು ಯೋಚಿಸಿದ್ದಾರೆ.

[5] ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ ಉರುಲನ್ನೂ, ಪಾಶಗಳನ್ನೂ ಒಡ್ಡಿದ್ದಾರೆ, ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ, ನನಗಾಗಿ ಬಲೆಬೀಸಿಟ್ಟಿದ್ದಾರೆ. ಸೆಲಾ

[6] ನಾನು ಯೆಹೋವನಿಗೆ, “ನೀನೇ ನನ್ನ ದೇವರು, ಯೆಹೋವನೇ, ನನ್ನ ವಿಜ್ಞಾಪನೆಗೆ ಕಿವಿಗೊಡು,

[7] ಕರ್ತನೇ, ಯೆಹೋವನೇ, ನನ್ನ ಆಶ್ರಯದುರ್ಗವೇ, ಯುದ್ಧ ಸಮಯದಲ್ಲಿ ನೀನೇ ನನ್ನ ಶಿರಸ್ತ್ರಾಣ,

[8] ಯೆಹೋವನೇ, ದುಷ್ಟರು ತಮ್ಮನ್ನು ಹೆಚ್ಚಿಸಿಕೊಳ್ಳದಂತೆ, ಅವರ ಆಶೆಗಳನ್ನು ನೆರವೇರಿಸಬೇಡ, ಅವರ ಕುಯುಕ್ತಿಯನ್ನು ಸಾಗಗೊಡಿಸಬೇಡ” ಎಂದು ಹೇಳುತ್ತೇನೆ. ಸೆಲಾ

[9] ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು ಅವರ ತಲೆಯ ಮೇಲೆಯೇ ಬರಲಿ,

[10] ಅವರ ಮೇಲೆ ಕೆಂಡಗಳು ಸುರಿಯಲಿ, ಅವರು ಅಗ್ನಿಕುಂಡದೊಳಕ್ಕೂ, ಆಳವಾದ ತಗ್ಗಿನೊಳಕ್ಕೂ ದೊಬ್ಬಲ್ಪಟ್ಟು ತಿರುಗಿ ಏಳದಿರಲಿ.

[11] ಚಾಡಿಗಾರನು ದೇಶದಲ್ಲಿ ಉಳಿಯನು, ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವುದು.

[12] ಯೆಹೋವನು ದೀನರ ವ್ಯಾಜ್ಯವನ್ನು ನಡೆಸುವನೆಂತಲೂ, ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು.

[13] ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು, ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು.

ಕೀರ್ತನೆಗಳು — Chapters