[1] ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ.
[2] ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ.
[3] ಯೆಹೋವನು ಸ್ತೋತ್ರಕ್ಕೆ ಅರ್ಹನು; ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.
[4] ಮೃತ್ಯುಪಾಶಗಳು ನನಗೆ ಸುತ್ತಿಕೊಂಡವು; ನಾಶಪ್ರವಾಹವು ನನ್ನನ್ನು ನಡುಗಿಸಿತು.
[5] ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು; ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
[6] ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಶಬ್ದವನ್ನು ಕೇಳಿದನು; ನನ್ನ ಕೂಗು ಆತನಿಗೆ ಕೇಳಿಸಿತು.
[7] ಆಗ ಆತನಿಗೆ ಸಿಟ್ಟೇರಿದ್ದರಿಂದ, ಭೂಮಿಯು ಗಡಗಡನೆ ಕಂಪಿಸಿತು, ಪರ್ವತಗಳ ಬುಡಗಳು ನಡುಗಿ ಕದಲಿದವು.
[8] ಆತನ ಮೂಗಿನಿಂದ ಹೊಗೆಯು ಎದ್ದು; ಆತನ ಬಾಯಿಂದ ಅಗ್ನಿಜ್ವಾಲೆ ಹೊರಟು, ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.
[9] ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.
[10] ಕೆರೂಬಿವಾಹನನಾಗಿ ಹಾರಿ, ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಆತನು ಇಳಿದು ಬಂದನು.
[11] ಕತ್ತಲನ್ನು ತನ್ನ ಸುತ್ತಲು ಗುಡಾರದಂತೆ ಕವಿಸಿಕೊಂಡು, ಜಲಮಯವಾಗಿರುವ ನೀಲಮೇಘಗಳ ಮಧ್ಯದಲ್ಲಿ ಮರೆಯಾದನು.
[12] ಆತನ ಸನ್ನಿಧಿಯ ಪ್ರಕಾಶದಿಂದ ಕಲ್ಮಳೆಯೂ, ಉರಿಗೆಂಡಗಳೂ ಹೊರಟು, ಆತನ ಸುತ್ತಲಿದ್ದ ಕಪ್ಪು ಮೋಡಗಳನ್ನು ದಾಟಿ ಸುರಿದವು.
[13] ಯೆಹೋವನು ಆಕಾಶದಲ್ಲಿ ಗುಡುಗಿದನು; ಪರಾತ್ಪರನಾದ ದೇವರು ಧ್ವನಿಗೊಟ್ಟನು. ಕಲ್ಮಳೆಯೂ, ಉರಿಗೆಂಡಗಳೂ ಹೊರಟವು.
[14] ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದರಿಸಿಬಿಟ್ಟನು; ಸಿಡಿಲುಗಳಿಂದ ಕಳವಳಗೊಳಿಸಿದನು.
[15] ಆಗ ಯೆಹೋವನೇ, ನಿನ್ನ ಗದರಿಕೆಯಿಂದಲೂ, ನಿನ್ನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ತಿವಾರಗಳು ಕಂಡುಬಂದವು.
[16] ಆತನು ಮೇಲಣ ಲೋಕದಿಂದ ಕೈಚಾಚಿ, ನನ್ನನ್ನು ಹಿಡಿದು, ಮಹಾಜಲರಾಶಿಗಳೊಳಗಿಂದ ಎಳೆದನು.
[17] ನನಗಿಂತ ಬಲಿಷ್ಠರೂ, ಪುಷ್ಟರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು.
[18] ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು, ಆಗ ಯೆಹೋವನು ನನಗೆ ಉದ್ಧಾರಕನಾದನು.
[19] ಆತನು ನನ್ನನ್ನು ಬಿಡಿಸಿ ವಿಶಾಲ ಸ್ಥಳದಲ್ಲಿ ಸೇರಿಸಿದನು; ನನ್ನನ್ನು ಮೆಚ್ಚಿ ರಕ್ಷಿಸಿದನು.
[20] ಯೆಹೋವನು ನನ್ನ ನೀತಿಗೆ ಸರಿಯಾಗಿ ಮೇಲನ್ನು ಮಾಡಿದನು, ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಟ್ಟನು.
[21] ನಾನು ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ; ನನ್ನ ದೇವರನ್ನು ಬಿಟ್ಟು ದುಷ್ಟನಾಗಲಿಲ್ಲವಲ್ಲಾ.
[22] ನಾನು ಆತನ ನೀತಿಯ ಆಜ್ಞೆಗಳನ್ನು ಯಾವಾಗಲೂ ನನ್ನ ಎದುರಿನಲ್ಲಿ ಇಟ್ಟುಕೊಂಡೆನು; ಆತನ ವಿಧಿಗಳನ್ನು ಅಲಕ್ಷ್ಯಮಾಡಲೇ ಇಲ್ಲ.
[23] ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು; ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು.
[24] ಆದುದರಿಂದ ನಾನು ನೀತಿವಂತನೂ, ನಿರಪರಾಧಿಯೂ ಎಂದು ನೋಡಿ, ಯೆಹೋವನು ತಕ್ಕ ಪ್ರತಿಫಲವನ್ನು ಕೊಟ್ಟನು.
[25] ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವನಿಗೆ ನಿರ್ದೋಷಿಯೂ,
[26] ಶುದ್ಧನಿಗೆ ಪರಿಶುದ್ಧನೂ, ಮೂರ್ಖನಿಗೆ ವಕ್ರನೂ ಆಗಿರುವಿ.
[27] ದೀನರನ್ನು ಉದ್ಧರಿಸುವವನೂ, ಗರ್ವದ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ?
[28] ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ; ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು.
[29] ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಗೋಡೆಯನ್ನು ಹಾರುವೆನು.
[30] ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.
[31] ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?
[32] ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ, ನನ್ನ ಮಾರ್ಗವನ್ನು ಸರಾಗ ಮಾಡುವವನೂ ದೇವರೇ.
[33] ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ; ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ.
[34] ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.
[35] ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.
[36] ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದ ನನ್ನ ಪಾದಗಳು ಕದಲುವುದಿಲ್ಲ.
[37] ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದುಕೊಳ್ಳುವೆನು; ಅವರನ್ನು ಇಲ್ಲದಂತೆ ಮಾಡುವವರೆಗೂ ಹಿಂದಿರುಗುವುದಿಲ್ಲ.
[38] ಅವರನ್ನು ಹೊಡೆದು ಏಳಲಾರದಂತೆ ಮಾಡುವೆನು; ನನ್ನ ಪಾದದ ಕೆಳಗೆ ಬೀಳುವರು.
[39] ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ; ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದೀ.
[40] ನನ್ನ ಶತ್ರುಗಳು ನನಗೆ ಬೆನ್ನುಕೊಟ್ಟು ಓಡುವಂತೆ ಮಾಡಿದ್ದೀ; ನನ್ನ ಹಗೆಯವರನ್ನು ನಾನು ನಿರ್ಮೂಲಮಾಡುವೆನು.
[41] ಅವರು ಕೂಗಿಕೊಂಡರೂ ರಕ್ಷಿಸುವವನಿಲ್ಲ; ಯೆಹೋವನಿಗೆ ಮೊರೆಯಿಟ್ಟರೂ ಆತನು ಉತ್ತರವನ್ನು ಕೊಡಲೇ ಇಲ್ಲ.
[42] ಗಾಳಿಯಿಂದ ಬಡಿಸಿಕೊಂಡು ಹೋಗುವ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ಎಸೆದುಬಿಟ್ಟೆನು.
[43] ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿ ಜನಾಂಗಗಳಿಗೆ ದೊರೆಯಾಗುವಂತೆ ಮಾಡಿದ್ದೀ; ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು.
[44] ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು; ದೇಶಾಂತರದವರು ನನ್ನ ಮುಂದೆ ಅಂಜಿ ನಡುಗುವರು.
[45] ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು.
[46] ಯೆಹೋವನು ಚೈತನ್ಯಸ್ವರೂಪನು; ನನ್ನ ಶರಣನಿಗೆ ಸ್ತೋತ್ರ; ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ.
[47] ಆತನು ನನ್ನ ಶತ್ರುಗಳಿಗೆ ಪ್ರತಿದಂಡನೆಮಾಡುವ ದೇವರು; ಜನಾಂಗಗಳನ್ನು ನನಗೆ ಅಧೀನಪಡಿಸುತ್ತಾನೆ.
[48] ಶತ್ರುಗಳಿಂದ ನನ್ನನ್ನು ಬಿಡಿಸುವಾತನೇ, ನೀನು ನನ್ನನ್ನು ನನ್ನ ಎದುರಾಳಿಗಳಿಗೆ ತಪ್ಪಿಸಿ ಉನ್ನತಪಡಿಸುತ್ತೀ; ಬಲಾತ್ಕಾರಿಗಳಿಂದ ನನ್ನನ್ನು ರಕ್ಷಿಸುತ್ತೀ.
[49] ಈ ಕಾರಣದಿಂದ ಯೆಹೋವನೇ, ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು.
[50] ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ; ತಾನು ಅಭಿಷೇಕಿಸಿದ ದಾವೀದನಿಗೂ ಮತ್ತು ಅವನ ಸಂತತಿಯವರಿಗೂ ಸದಾಕಾಲ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.