[1] ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು.
[2] ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.
[3] ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.
[4] ಮಹತ್ಕಾರ್ಯಗಳನ್ನು ನಡೆಸುವುದಕ್ಕೆ ಆತನೊಬ್ಬನೇ ಶಕ್ತನು, ಆತನ ಪ್ರೀತಿಯು ಶಾಶ್ವತವಾದದ್ದು.
[5] ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
[6] ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
[7] ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
[8] ಸೂರ್ಯನು ಹಗಲನ್ನು ಆಳುತ್ತಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
[9] ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ, ಆತನ ಪ್ರೀತಿಯು ಶಾಶ್ವತವಾದದ್ದು.
[10] ಆತನು ಐಗುಪ್ತ್ಯರ ಚೊಚ್ಚಲ ಮಕ್ಕಳನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
[11] ಇಸ್ರಾಯೇಲರನ್ನು ಅವರ ಮಧ್ಯದಿಂದ ಹೊರಗೆ ತಂದನು, ಆತನ ಪ್ರೀತಿಯು ಶಾಶ್ವತವಾದದ್ದು.
[12] ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
[13] ಆತನು ಕೆಂಪು ಸಮುದ್ರವನ್ನು ವಿಭಾಗಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
[14] ಇಸ್ರಾಯೇಲರನ್ನು ಅದರ ಮಧ್ಯದಲ್ಲಿಯೇ ನಡೆಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
[15] ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು.
[16] ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು, ಆತನ ಪ್ರೀತಿಯು ಶಾಶ್ವತವಾದದ್ದು.
[17] ದೊಡ್ಡ ಅರಸರನ್ನು ಹೊಡೆದನು, ಆತನ ಪ್ರೀತಿಯು ಶಾಶ್ವತವಾದದ್ದು.
[18] ಶ್ರೇಷ್ಠ ರಾಜರನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
[19] ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು, ಆತನ ಪ್ರೀತಿಯು ಶಾಶ್ವತವಾದದ್ದು.
[20] ಬಾಷಾನಿನ ಅರಸನಾದ ಓಗನು ಇನ್ನೊಬ್ಬನು, ಆತನ ಪ್ರೀತಿಯು ಶಾಶ್ವತವಾದದ್ದು.
[21] ಅವರ ದೇಶವನ್ನು ಇಸ್ರಾಯೇಲರಿಗೆ ಸ್ವತ್ತಾಗಿ ಕೊಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು.
[22] ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು, ಆತನ ಪ್ರೀತಿಯು ಶಾಶ್ವತವಾದದ್ದು.
[23] ನಾವು ದೀನಾವಸ್ಥೆಯಲ್ಲಿ ಇದ್ದಾಗ ನಮ್ಮನ್ನು ನೆನಪುಮಾಡಿಕೊಂಡನು, ಆತನ ಪ್ರೀತಿಯು ಶಾಶ್ವತವಾದದ್ದು.
[24] ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
[25] ಎಲ್ಲಾ ಜೀವಿಗಳಿಗೂ ಆಹಾರ ಕೊಡುವವನು ಆತನೇ, ಆತನ ಪ್ರೀತಿಯು ಶಾಶ್ವತವಾದದ್ದು.
[26] ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.