Skip to content
Opens in a new window
Listen to this chapter • 1:27

[1] ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ.

[2] ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು; ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.

[3] ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ಪ್ರವೇಶಿಸುವುದಕ್ಕೆ ಎಂಥವನು ಯೋಗ್ಯನು?

[4] ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ, ಮೋಸ ಪ್ರಮಾಣಮಾಡದೆ, ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ,

[5] ಅವನೇ ಯೆಹೋವನಿಂದ ಶುಭವನ್ನು ಹೊಂದುವನು; ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.

[6] ಇಂಥವರೇ ಆತನ ದರ್ಶನವನ್ನು ಬಯಸುವವರು. ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ. ಸೆಲಾ

[7] ದ್ವಾರಗಳೇ, ಉನ್ನತವಾಗಿರ್ರಿ! ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ! ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.

[8] ಮಹಾಮಹಿಮೆಯುಳ್ಳ ಈ ಅರಸನು ಯಾರು? ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ, ಯುದ್ಧವೀರನಾಗಿರುವ ಯೆಹೋವ.

[9] ದ್ವಾರಗಳೇ, ಉನ್ನತವಾಗಿರ್ರಿ! ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ! ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.

[10] ಮಹಾಮಹಿಮೆಯುಳ್ಳ ಈ ಅರಸನು ಯಾರು? ಸೇನಾಧೀಶ್ವರನಾದ ಯೆಹೋವನೇ, ಮಹಾಮಹಿಮೆಯುಳ್ಳ ಅರಸನು ಈತನೇ. ಸೆಲಾ.

ಕೀರ್ತನೆಗಳು — Chapters