Skip to content
Opens in a new window
Listen to this chapter • 1:23

[1] ಯೆಹೋವನಿಗೆ ಸ್ತೋತ್ರ! ನನ್ನ ಮನವೇ, ಯೆಹೋವನನ್ನು ಸ್ತುತಿಸು.

[2] ಪ್ರಾಣವಿರುವವರೆಗೂ ಯೆಹೋವನನ್ನು ಸ್ತುತಿಸುವೆನು, ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.

[3] ಪ್ರಭುಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಭರವಸವಿಡಬೇಡಿರಿ, ಅವರು ಸಹಾಯ ಮಾಡ ಶಕ್ತರಲ್ಲ,

[4] ಉಸಿರು ಹೋಗಲು ಅವರು ಮಣ್ಣಿಗೆ ಸೇರುತ್ತಾರೆ, ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುದು.

[5] ಯಾರಿಗೆ ಯಾಕೋಬನ ದೇವರು ಸಹಾಯಕನೋ, ಯಾರು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ, ಅವನೇ ಧನ್ಯನು.

[6] ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ, ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ,

[7] ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ, ಹಸಿದವರಿಗೆ ಆಹಾರ ಕೊಡುವವನೂ ಆತನೇ. ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ.

[8] ಯೆಹೋವನು ಕುರುಡರಿಗೆ ಕಣ್ಣು ಕೊಡುತ್ತಾನೆ. ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ. ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ.

[9] ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ. ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ.

[10] ಯೆಹೋವನು ಸದಾಕಾಲವೂ ಅರಸನಾಗಿರುವನು, ಚೀಯೋನೇ, ನಿನ್ನ ದೇವರು ತಲತಲಾಂತರಕ್ಕೂ ಆಳುವನು, ಯೆಹೋವನಿಗೆ ಸ್ತೋತ್ರ!

ಕೀರ್ತನೆಗಳು — Chapters