[1] ಯೆಹೋವನೇ, ಪೂರ್ಣಮನಸ್ಸಿನಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಎದುರಿನಲ್ಲಿ ನಿನ್ನನ್ನು ಕೀರ್ತಿಸುವೆನು.
[2] ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುತ್ತೇನೆ; ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ ನಿನ್ನ ನಾಮವನ್ನು ಕೊಂಡಾಡುತ್ತೇನೆ. ನಿನ್ನ ನಾಮದ ಮತ್ತು ಆಜ್ಞೆಯ ಘನಪಡಿಸಿ ತೋರಿಸಿದ್ದೀ.
[3] ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ.
[4] ಯೆಹೋವನೇ, ಭೂರಾಜರೆಲ್ಲರು ನೀನು ನುಡಿದ ನುಡಿಗಳನ್ನು ಕೇಳಿ ನಿನ್ನನ್ನು ಸ್ತುತಿಸುವರು.
[5] ಅವರು ಯೆಹೋವನ ಮಾರ್ಗಗಳನ್ನು ಹಾಡಿಹರಸುವರು; ಯೆಹೋವನ ಪ್ರಭಾವವು ದೊಡ್ಡದಾಗಿದೆಯಲ್ಲಾ.
[6] ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತು ಹಿಡಿಯುತ್ತಾನೆ.
[7] ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ, ನನ್ನನ್ನು ಚೈತನ್ಯಗೊಳ್ಳಿಸುವಿ, ನನ್ನ ಶತ್ರುಗಳ ಕೋಪಕ್ಕೆ ವಿರುದ್ಧವಾಗಿ ನಿನ್ನ ಕೈ ಚಾಚುವಿ, ನಿನ್ನ ಬಲಗೈ ನನ್ನನ್ನು ರಕ್ಷಿಸುವುದು.
[8] ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು. ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು, ನೀನು ಕೈಹಾಕಿದ ಕೆಲಸವನ್ನು ನೆರವೇರಿಸದೆ ಬಿಡಬೇಡ.