Skip to content
Opens in a new window
Listen to this chapter • 2:33

[1] ಯೆಹೋವನೇ, ನನ್ನ ದೇವರೇ, ನಿನ್ನ ಮೊರೆಹೊಕ್ಕಿದ್ದೇನೆ; ಬೆನ್ನಟ್ಟುವವರೆಲ್ಲರಿಂದ ತಪ್ಪಿಸಿ ನನ್ನನ್ನು ಕಾಪಾಡು.

[2] ಇಲ್ಲವಾದರೆ ನನಗೆ ರಕ್ಷಕನಿಲ್ಲವೆಂದು ತಿಳಿದು, ಶತ್ರುವು ಸಿಂಹದಂತೆ ಮೇಲೆ ಬಿದ್ದು ನನ್ನನ್ನು ಹರಿದುಬಿಟ್ಟಾನು.

[3] ಯೆಹೋವನೇ, ನನ್ನ ದೇವರೇ, ನಾನು ಕೈಗಳಲ್ಲಿ ಅನ್ಯಾಯವುಳ್ಳವನೂ,

[4] ಮಿತ್ರದ್ರೋಹಿಯೂ ಆಗಿದ್ದರೆ ಶತ್ರುವು ಹಿಂದಟ್ಟಿ ಬಂದು, ನನ್ನನ್ನು ಹಿಡಿದು, ನೆಲಕ್ಕೆ ಕೆಡವಿ ತುಳಿಯಲಿ;

[5] ನನ್ನ ಮಾನವನ್ನು ಮಣ್ಣುಪಾಲು ಮಾಡಲಿ. ನಾನಂಥವನಲ್ಲ; ನಿಷ್ಕಾರಣ ವೈರಿಯನ್ನು ರಕ್ಷಿಸಿದೆನಲ್ಲ. ಸೆಲಾ

[6] ಯೆಹೋವನೇ, ನ್ಯಾಯಸ್ಥಾಪಕನೇ, ನನಗೋಸ್ಕರ ಎಚ್ಚರವಾಗು. ಮಹಾಕೋಪದಿಂದ ಎದ್ದುಬಂದು ನನ್ನ ವಿರೋಧಿಗಳ ಕ್ರೋಧವನ್ನು ಭಂಗಪಡಿಸು.

[7] ಎಲ್ಲಾ ಜನಾಂಗಗಳು ನಿನ್ನ ಸುತ್ತಲು ಸಭೆಯಾಗಿ ಕೂಡಿರುವಲ್ಲಿ ನೀನು ಪುನಃ ಆರೋಹಣಮಾಡು.

[8] ಯೆಹೋವನು ಎಲ್ಲಾ ಜನಾಂಗಳಿಗೂ ನ್ಯಾಯತೀರಿಸುವವನಾಗಿದ್ದಾನೆ. ಯೆಹೋವನೇ, ನಿರಪರಾಧಿಯೂ, ನೀತಿವಂತನೂ ಆಗಿರುವ ನನಗೋಸ್ಕರ ನ್ಯಾಯತೀರಿಸು.

[9] ಮನುಷ್ಯರ ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರಿಶೋಧಿಸುವ ನೀತಿಸ್ವರೂಪನಾದ ದೇವರೇ, ದುಷ್ಟರ ಕೆಟ್ಟತನವು ಇಲ್ಲದೆ ಹೋಗುವಂತೆ ಮಾಡು; ನೀತಿವಂತರನ್ನು ದೃಢಪಡಿಸು.

[10] ನನ್ನನ್ನು ರಕ್ಷಿಸುವ ಗುರಾಣಿಯು ದೇವರೇ; ಆತನು ಯಥಾರ್ಥರನ್ನು ಕಾಪಾಡುತ್ತಾನೆ.

[11] ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು; ಆತನು ಯಾವಾಗಲೂ ದುಷ್ಟರ ವಿಷಯದಲ್ಲಿ ಕೋಪವುಳ್ಳವನು.

[12] ದೋಷಿಯು ಮನಸ್ಸನ್ನು ಬದಲಾಯಿಸಿಕೊಳ್ಳದೆ ಹೋದರೆ ಆತನು ತನ್ನ ಕತ್ತಿಯನ್ನು ಮಸೆಯುವನು. ತನ್ನ ಬಿಲ್ಲನ್ನು ಬಗ್ಗಿಸಿ ಸಿದ್ಧಮಾಡಿದ್ದಾನೆ.

[13] ಆತನು ಅದಕ್ಕೆ ಮರಣಕರವಾದ ಅಗ್ನಿಬಾಣಗಳನ್ನು ಹೂಡಿ ಅವನ ಮೇಲೆ ಪ್ರಯೋಗಿಸುವುದಕ್ಕೆ ಗುರಿಯಿಟ್ಟು ನಿಂತಿದ್ದಾನೆ.

[14] ನನ್ನ ಶತ್ರುವು ಬದಲಾಯಿಸಿಕೊಳ್ಳದೆ ಕೇಡನ್ನು ಹೆರಬೇಕೆಂದು ಪ್ರಸವವೇದನೆಯಲ್ಲಿದ್ದಾನೆ; ಅವನು ಹಾನಿಯನ್ನು ಹಡೆಯುವೆನೆಂದು ನೆನಸಿಕೊಂಡರೂ, ಶೂನ್ಯವನ್ನೇ ಹೆತ್ತನು ನೋಡಿರಿ.

[15] ಅವನು ಅಗೆದು ಅಗೆದು ಗುಂಡಿಯನ್ನು ತೋಡಿ, ಅದರೊಳಗೆ ತಾನೇ ಬಿದ್ದುಹೋದನಲ್ಲಾ.

[16] ಅವನು ಮಾಡಿದ ಕುಯುಕ್ತಿ ಅವನ ತಲೆಯ ಮೇಲೆಯೇ ಬರುವುದು; ಅವನು ಮಾಡಬೇಕೆಂದಿದ್ದ ಅನ್ಯಾಯವು ಸ್ವಂತ ತಲೆಯ ಮೇಲೆ ಬೀಳುವುದು.

[17] ಯೆಹೋವನು ಮಾಡಿದ ನ್ಯಾಯವಾದ ತೀರ್ಪಿಗಾಗಿ, ನಾನು ಆತನನ್ನು ಕೊಂಡಾಡುವೆನು. ಪರಾತ್ಪರ ದೇವನಾದ ಯೆಹೋವನ ನಾಮವನ್ನು ಸಂಕೀರ್ತಿಸುವೆನು.

ಕೀರ್ತನೆಗಳು — Chapters