Skip to content
Opens in a new window
Listen to this chapter • 1:55

[1] ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯತೆಗಳ ನಿಮಿತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು.

[2] “ಅವರ ದೇವರು ಎಲ್ಲಿದ್ದಾನೆ?” ಎಂದು ಅನ್ಯರು ಏಕೆ ಹೇಳಬೇಕು?

[3] ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.

[4] ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

[5] ಅವು ಬಾಯಿದ್ದರೂ ಮಾತನಾಡುವುದಿಲ್ಲ; ಕಣ್ಣಿದ್ದರೂ ನೋಡುವುದಿಲ್ಲ.

[6] ಕಿವಿಯಿದ್ದರೂ ಕೇಳುವುದಿಲ್ಲ; ಮೂಗಿದ್ದರೂ ಮೂಸುವುದಿಲ್ಲ.

[7] ಕೈಯುಂಟು ಮುಟ್ಟುವುದಿಲ್ಲ; ಕಾಲುಂಟು ನಡೆಯುವುದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.

[8] ಅವುಗಳನ್ನು ಮಾಡುವವರೂ, ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.

[9] ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.

[10] ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.

[11] ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.

[12] ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು.

[13] ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; ಆರೋನನ ಮನೆತನದವರನ್ನು ಆಶೀರ್ವದಿಸುವನು. ತನ್ನ ಭಕ್ತರನ್ನು ಆಶೀರ್ವದಿಸುವನು.

[14] ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;

[15] ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.

[16] ಪರಲೋಕವು ಯೆಹೋವನದು; ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ.

[17] ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ.

[18] ನಾವೋ ಇಂದಿನಿಂದ ಸದಾಕಾಲವೂ ಯೆಹೋವನನ್ನು ಕೊಂಡಾಡುವೆವು. ಯೆಹೋವನಿಗೆ ಸ್ತೋತ್ರ!

ಕೀರ್ತನೆಗಳು — Chapters