Skip to content
Opens in a new window
Listen to this chapter • 1:48

[1] ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.

[2] ಆದುದರಿಂದ ಭೂಮಿಯು ಮಾರ್ಪಟ್ಟರೂ, ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ, ನಮಗೇನೂ ಭಯವಿಲ್ಲ.

[3] ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು? ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ? ಸೆಲಾ

[4] ಒಂದು ನದಿ ಇದೆ; ಅದರ ಕಾಲುವೆಗಳು, ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ, ದೇವರ ನಗರವನ್ನು ಸಂತೋಷಪಡಿಸುತ್ತವೆ.

[5] ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ. ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.

[6] ಜನಾಂಗಗಳು ಕಳವಳಗೊಂಡವು; ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.

[7] ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ

[8] ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.

[9] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ; ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.

[10] “ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.

[11] ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ.

ಕೀರ್ತನೆಗಳು — Chapters